ಮಂಗಳೂರು,ಜ.31: ದಶಕದ ಹಿಂದೆ ಕಾಮಗಾರಿಗೆ ಚಾಲನೆ ನೀಡಲಾಗಿದ್ದ ಪಂಪ್‌ವೆಲ್ ಫ್ಲೈಓವರ್ ಅನ್ನು ಶುಕ್ರವಾರ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿದರು.
ಕರಾವಳಿಯಲ್ಲಿ ಅತಿಹೆಚ್ಚು ಬಾರಿ ಟ್ರೋಲ್ಗೊಳಗಾಗಿದ್ದ ಪಂಪ್ವೆಲ್ ಮೇಲ್ಸೇತುವೆ ಬರೋಬ್ಬರಿ 10 ವರ್ಷಗಳ ನಂತರ ಕೊನೆಗೂ ಸಂಚಾರಕ್ಕೆ ಮುಕ್ತವಾಗಿದೆ. ಇಂದು ನಡೆದ ಅದ್ದೂರಿ ಸಮಾರಂಭದಲ್ಲಿ ಸಂಸದ ಹಾಗೂ ಬಿಜೆಪಿ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇತುವೆಯನ್ನು ಸಂಚಾರಮುಕ್ತ ಗೊಳಿಸಿದ್ದಾರೆ.
2010ರಲ್ಲಿ ನವಯುಗ ಕಂಪನಿ ಈ ಕಾಮಗಾರಿ ಆರಂಭಿಸಿತ್ತು. ಆರಂಭದಲ್ಲಿ ಚುರುಕಾಗಿ ನಡೆದ ಕಾಮಗಾರಿ ನಂತರ ನಿಧಾನಗತಿಯಲ್ಲಿ ನಡೆದಿತ್ತು. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿ ಪರಿಣಮಿಸಿತ್ತು.
2010ರಿಂದ ಇದುವರೆಗೂ ಆರೇಳು ಬಾರಿ ಈ ಕಾಮಗಾರಿಯನ್ನು ಪೂರ್ಣಗೊಳಿಸಲು ಗಡುವು ವಿಸ್ತರಣೆಯಾಗಿತ್ತು. ಇದೀಗ 600 ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು ಡಾಂಬರೀಕರಣವೂ ಮುಗಿದಿದ್ದು ಸಂಚಾರಕ್ಕೆ ಮುಕ್ತವಾಗಿದೆ.
1 ದಶಕ ಕಳೆದರೂ ಪಂಪ್ವೆಲ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲು ವಿರುದ್ಧ ಮಂಗಳೂರಿಗರು ಆಕ್ರೋಶ ಹೊರಹಾಕಿದ್ದರು. 10 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಮಂಗಳೂರಿನ ಪಂಪ್ವೆಲ್ ಫ್ಲೈಓವರ್ ಕಾಮಗಾರಿ 2019ರ ಡಿಸೆಂಬರ್ ವೇಳೆಗೆ ಮುಗಿದು, 2020ರ ಹೊಸ ವರ್ಷಕ್ಕೆ ಉದ್ಘಾಟನೆ ಆಗುತ್ತದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಭರವಸೆ ನೀಡಿದ್ದರು. ಆದರೆ, ಆ ಭರವಸೆಯೂ ಹುಸಿಯಾಗಿದ್ದಾಗ ಕರಾವಳಿಜ ಜನ ಅಕ್ಷರಶಃ ಕೆಂಡಾಮಂಡಲವಾಗಿದ್ದರು.
ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಶುಕ್ರವಾರ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುದರ್ಶನ್, ಬಿಜೆಪಿ ಕಾರ್ಯಕರ್ತರು, ಪಾಲಿಕೆ ಸದಸ್ಯರು ಇದ್ದರು.