ಬೀಜಿಂಗ್: ಚೀನಾದ ಪ್ರಮುಖ ನಗರಗಳಲ್ಲಿ ಕೊರೊನಾ ವೈರಸ್ ಹಬ್ಬಿ 132 ಮಂದಿ ಮೃತಪಟ್ಟು 6 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವ ಹಿನ್ನಲೆಯಲ್ಲಿ ಅನೇಕ ದೇಶಗಳು ತಮ್ಮ ನಾಗರಿಕರನ್ನು ಅಲ್ಲಿಂದ ಸ್ಥಳಾಂತರ ಮಾಡುವ ಕಾರ್ಯದಲ್ಲಿ ನಿರತವಾಗಿವೆ.ಚೀನಾದಿಂದ ಬರುವ ನಾಗರಿಕರನ್ನು ಕೊರೊನಾ ವೈರಸ್ ಸೋಂಕು ತಗುಲಿದೆಯೇ ಎಂದು ಪರೀಕ್ಷಿಸಿ ಬಿಡಲಾಗುತ್ತಿದೆ.
ಚೀನಾದ ವುಹಾನ್ ಪ್ರಾಂತ್ಯವೊಂದರಲ್ಲಿಯೇ ಕೊರೊನಾ ವೈರಸ್ ನಿಂದ ಮೃತಪಟ್ಟ ರೋಗಿಗಳ ಸಂಖ್ಯೆ 26ಕ್ಕೇರಿದೆ. ವುಹಾನ್ ನಿಂದ 206 ಮಂದಿಯನ್ನು ವಿಮಾನದಲ್ಲಿ ತನ್ನ ದೇಶಕ್ಕೆ ಕರೆಸಿಕೊಳ್ಳುತ್ತಿರುವ ಜಪಾನ್ ವಿಮಾನದಲ್ಲಿ ಪ್ರಯಾಣಿಸುವವರಲ್ಲಿ ಕೆಲವರಲ್ಲಿ ಕಫ ಮತ್ತು ಜ್ವರ ಕಾಣಿಸಿಕೊಂಡಿದೆ ಎಂದು ಕ್ಯೊಡೊ ನ್ಯೂಸ್ ವರದಿ ಮಾಡಿದೆ. ಅವರನ್ನು ಟೊಕ್ಯೊ ಆಸ್ಪತ್ರೆಗೆ ಆಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದುಬಂದಿದೆ.
ವುಹಾನ್ ನಿಂದ ಅಮೆರಿಕಾಕ್ಕೆ ಬಂದ ವಿಮಾನವನ್ನು ಅಲಸ್ಕದಲ್ಲಿ ಇಳಿಸಿ ಅಲ್ಲಿ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಿ ಕ್ಯಾಲಿಫೋರ್ನಿಯಾ, ಒಂಟಾರಿಯೊಗೆ ಕಳುಹಿಸಲಾಗುತ್ತಿದೆ. ಬ್ರಿಟನ್ ಸರ್ಕಾರ ಕೂಡ ತನ್ನ ದೇಶದ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ.
ದಕ್ಷಿಣ ಕೊರಿಯಾ ತನ್ನ ವಿಮಾನವನ್ನು ಕಳುಹಿಸಿ ನಾಗರಿಕರನ್ನು ವಾಪಸ್ ಕರೆಸಿಕೊಳ್ಳಲು ನೋಡುತ್ತಿದ್ದರೆ ಫ್ರಾನ್ಸ್, ಮಂಗೋಲಿಯಾ ಮತ್ತು ಇತರ ಸರ್ಕಾರಗಳು ಸಹ ಸ್ಥಳಾಂತರಗೊಳಿಸಲು ನೋಡುತ್ತಿವೆ.