janadhvani

Kannada Online News Paper

ಪದ್ಮಶ್ರೀ ಗೌರವಕ್ಕೆ ಭಾಜನರಾದ ‘ಅಕ್ಷರ ಸಂತ’ ಹಾಜಬ್ಬ

ಬೆಂಗಳೂರು: ಅನಕ್ಷರಸ್ಥರಾಗಿದ್ದರೂ ಕೂಡ ಇನ್ನೊಬ್ಬರ ಬಾಳಲ್ಲಿ ಅಕ್ಷರದ ಬೆಳಕು ಮೂಡಿಸಲು ಜೀವನವಿಡಿ ಶ್ರಮಿಸಿದ ಹರೇಕಳ ಹಾಜಬ್ಬರಿಗೆ ಈಗ ದೇಶದ ಪ್ರತಿಷ್ಠಿತ ಪದ್ಮಶ್ರೀ ಗೌರವ ಒಲಿದಿದೆ.

ದಕ್ಷಿಣ ಕನ್ನಡದ ನೆವಪಾಡುಡು ಗ್ರಾಮದಲ್ಲಿ 20 ವರ್ಷಗಳ ಕಾಲ ಕಿತ್ತಳೆ ಹಣ್ಣನ್ನು ಮಾರಿ ಮಸೀದಿಯೊಂದರಲ್ಲಿ ಹಾಜಬ್ಬ ಶಾಲೆಯನ್ನು ನಿರ್ಮಿಸಿದರು. ಮುಂದೆ ಈ ಇದನ್ನು ಸ್ಥಳೀಯ ಜನರು ಹಾಗೂ ಸರ್ಕಾರದ ನೆರವಿನಿಂದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಪರಿವರ್ತಿಸಿದರು. ಈಗ ಈ ಶಾಲೆಯನ್ನು ತಮ್ಮ ಗ್ರಾಮದ ಮಕ್ಕಳಿಗಾಗಿ ಪದವಿ ಪೂರ್ವ ಕಾಲೇಜಾಗಿ ಪರಿವರ್ತಿಸುವ ಯೋಜನೆಯನ್ನು ಹೊಂದಿದ್ದಾರೆ.

ಅನಕ್ಷರಸ್ಥರಾಗಿದ್ದುಕೊಂಡು ಜೀವನ ವಿಡಿ ಅನುಭವಿಸಿದ ಕಷ್ಟವು ಮುಂದಿನ ಪೀಳಿಗೆ ಸಹಿತ ತಮ್ಮಂತೆ ಕಷ್ಟ ಎದುರಿಸಬಾರದು ಎಂದು ಅವರು ಶಾಲೆಯನ್ನು ನಿರ್ಮಿಸಿದರು. ಈಗ ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಈಗ ಸರ್ಕಾರ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಪದ್ಮಶ್ರೀ ಗೌರವಕ್ಕೆ ಹೆಸರಿಸಿದೆ.


ಅಕ್ಷರ ಸಂತ ಹರೇಕಳ ಹಾಜಬ್ಬ….!!!

✍ಸ್ನೇಹಜೀವಿ ಅಡ್ಕ

ಹೌದು,
ಅದು ಹದಿನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ಹಂಪನಕಟ್ಟೆಯ ಬಸ್ ಸ್ಟಾಂಡ್ ಬಳಿ ಕಿತ್ತಳೆ ಹಣ್ಣು ಮಾರುತ್ತಾ ಅಕ್ಷರದ ಕನಸು ಕಂಡವರು.

ತಾನು ಅನಕ್ಷರಸ್ಥನಾದರೂ ತನ್ನ ಊರಿನ ಜನತೆಯು ಶಿಕ್ಷಣದಿಂದ ವಂಚಿತರಾಗಬಾರದು ಅನ್ನುವ ದೃಢ ಸಂಕಲ್ಪದೊಂದಿಗೆ ನಿರಂತರವಾಗಿ ಸರ್ಕಾರಿ ಕಚೇರಿ ಹಾಗೂ ಶಿಕ್ಷಣ ಇಲಾಖೆಗಳಿಗೆ ಸುತ್ತಾಡಿ ಪರಿಶ್ರಮಿಸಿದ ಫಲವಾಗಿ 1999-2000 ದ ಅವದಿಯಲ್ಲಿ ಮಂಗಳೂರು ಬಳಿಯ ಹರೇಕಳದ ನ್ಯೂಪಡ್ಪು ಎಂಬಲ್ಲಿ ಸರಕಾರಿ ಪ್ರಾಥಮಿಕ ಶಾಲೆಯು ಮಂಜೂರಾಯಿತು.

ಶಾಲೆ ಮಂಜೂರಾದರೂ ಮೂಲಭೂತ ಸೌಕರ್ಯಗಳು ಒದಗಿಸಲು ಕಷ್ಟಕರವಾದ ಸಂದರ್ಭದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಹಾಜಬ್ಬರವರು ಜನಪ್ರತಿನಿಧಿಗಳು,ಹಾಗೂ ಊರ ದಾನಿಗಳ ನೆರವಿನಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಯಶಸ್ವಿಯಾದರು.

ಇಂದು ಹರೇಕಳ ಅನ್ನುವ ಊರಿನ ಹೆಸರು ಕೇಳುವಾಗಲೇ ನಮಗೆ ಥಟ್ಟನೆ ನೆನಪಿಗೆ ಬರುವುದು ಹರೇಕಳ ಹಾಜಬ್ಬ..!!
ಆ ರೀತಿಯಲ್ಲಿ ಅವರು ಜನಮಾನಸಗಳಲ್ಲಿ ಮನೆ ಮಾತಾಗಿ ಬಿಟ್ಟಿದ್ದಾರೆ.

ಇಂದು ಹರೇಕಳ ಅನ್ನುವ ಪ್ರದೇಶದಲ್ಲಿ ಸರ್ಕಾರಿ ಪ್ರೌಢ ಶಾಲೆಯು ಕಾರ್ಯಾಚರಿಸುತ್ತಿರಲು ಕಾರಣಕರ್ತರೇ ಈ ಹಾಜಬ್ಬ..

ಆದರೆ ಅವರೆಂದೂ ಪ್ರಚಾರವನ್ನು ಬಯಸಿದವರಲ್ಲ.
ಹಲವು ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬಂದವು.2004 ರಲ್ಲಿ ಕನ್ನಡ ಪ್ರಭ ವು ಅವರ ಸಂಕೀರ್ಣ ಸಾಧನೆಯನ್ನು ಗುರುತಿಸಿ ಅವರನ್ನು ಸನ್ಮಾನಿಸಿತು.ಖಾಸಗಿ ವಾಹಿನಿಯೊಂದು ಅವರ ಶಿಕ್ಷಣದ ಮೇಲಿನ ಅಭಿಮಾನವನ್ನು ಗುರುತಿಸಿ 5 ಲಕ್ಷ ರೂಪಾಯಿ ನಗದನ್ನು ನೀಡಿ ಅವರನ್ನು ಸನ್ಮಾನಿಸಿತು.
ಅದಲ್ಲದೆ ಕರ್ನಾಟಕದ. ರಾಜ್ಯ ಪ್ರಶಸ್ತಿ, ಹಾಗೂ ಹಲವು ಸಂಘ ಸಂಸ್ತೆಗಳು ಇವರನ್ನು ಗುರುತಿಸಿ ಸನ್ಮಾನಿಸಿದವು.

ಆದರೆ ಇವರೆಂದೂ ತನಗೆ ಪ್ರಶಸ್ತಿ,ನಗದುಗಳನ್ನು ತನ್ನ ಮನೆಯ ಖರ್ಚಿಗೋ,ಕುಟುಂಬದ ಖರ್ಚಿಗೋ ವಿನಿಯೋಗಿಸಲಿಲ್ಲ. ಬದಲಾಗಿ ಅವೆಲ್ಲವನ್ನೂ ಶಾಲೆಯ ಅಭಿವೃದ್ಧಿಗೋಸ್ಕರ ಉಪಯೋಗಿಸಿದರು.ತನಗೆ ಸಿಗುವ ಹಣದ ಚೆಕ್ ಗಳನ್ನೆಲ್ಲಾ ಶಾಲಾಭಿವೃಧ್ಧಿ ಯ ಹೆಸರಿನಲ್ಲೇ ಪಡೆದುಕೊಳ್ಳುತ್ತಾರೆ.
ಕಳೆದ ದಶಕಳಿಂದೀಚೆಗೆ ಅವರಿಗೆ ವಿವಿಧ ಸಂಘ ಸಂಸ್ಥೆಗಳು ನೀಡಿದ ಹಣದಿಂದ ಅವರು ಶಾಲಾಭಿವೃದ್ಧಿಗೆ ವಿನಿಯೋಗಿಸಿದ್ದು ಬರೋಬ್ಬರಿ 50 ಲಕ್ಷ ದಾಟಬಹುದು..!!!

ಹಾಜಬ್ಬರವರ ಜೀವನ ಚರಿತ್ರೆಗಳನ್ನು ಮೆಲುಕು ಹಾಕುವ ವಿಷಯಗಳು ಮಂಗಳೂರು ವಿಶ್ವ ವಿದ್ಯಾಲಯದ ಪಠ್ಯ ಪುಸ್ತಕದಲ್ಲೂ ಮೂಡಿಬಂದಿದೆ.

ಅದರೆ,ಹಾಜಬ್ಬ ಮಾತ್ರ ಬದಲಾಗಲೇ ಇಲ್ಲ.
ಎಂದಿನಂತೆ ದಿನ ಬೆಳಗಾದರೆ ಬಿಳಿ ಶರ್ಟ್,ಬಿಳಿ ಪಂಚೆಯನ್ನು ಉಟ್ಟುಕೊಂಡು ತನ್ನ ಎಂದಿನ ಕಾಯಕವಾದ ಕಿತ್ತಳೆ ಹಣ್ಣು ಮಾರುವುದರಲ್ಲೇ ತಲ್ಲೀನರಾಗಿದ್ದಾರೆ.

ಹಾಜಬ್ಬರವರ ಸಾಧನೆಯನ್ನು ಗಮನಿಸಿ ಯಾರಾದರೂ ಅವರ ಮನೆಯ ಕಡೆ ಧಾವಿಸಿದರೆ ಅಲ್ಲಿ ಅವರು ಅಸಹಾಯಕತೆಯಿಂದ ನೋಡುತ್ತಾರೆ.ಇಬ್ಬರು ಹೆಣ್ಣು ಮಕ್ಕಳು,ಒಬ್ಬ ಗಂಡು ಮಗ, ಖಾಯಿಲೆ ಪೀಡಿತ ಹೆಂಡತಿಯ ಜತೆ ಪುಟ್ಟ ಮನೆಯಲ್ಲಿ ವಾಸ..!!!

ಹಾಜಬ್ಬರವರಿಗೆ ಮನಸ್ಸು ಮಾಡಿದರೆ ದೊಡ್ಡ ಬಂಗಲೆಯನ್ನೇ ನಿರ್ಮಿಸಬಹುದಿತ್ತು.ಅಷ್ಟೊಂದು ಪ್ರಶಸ್ತಿಗಳು, ನಗದುಗಳು ಅವರನ್ನು ಹುಡುಕಿಕೊಂಡು ಬಂದರೂ ಅವರೆಂದು ಸ್ವಾರ್ಥತೆಯನ್ನು ಚಿಂತಿಸಲಿಲ್ಲ ಅವೆಲ್ಲವನ್ನೂ ತನ್ನ ಊರಿನ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಿದರು..!!

ಈ ಅರುವತ್ತರ ಇಳಿ ವಯಸ್ಸಿನಲ್ಲೂ ಹಾಜಬ್ಬರ ಶಿಕ್ಷಣದ ಮೇಲಿನ ಪ್ರೀತಿ,ಸಾಮಾಜಿಕ ಕಳಕಳಿ ಆಶ್ಚರ್ಯ ಹುಟ್ಟಿಸುವಂತಿದೆ.

ಹಾಜಬ್ಬರವರಿಗೆ ಹಾಜಬ್ಬರವರೇ ಸಾಟಿ..!!

ಹರೇಕಳ ಹಾಜಬ್ಬರವರ ಜೀವನದ ಯಶೋಗಾಥೆಯು ನಮಗೆ ಪ್ರೇರಣೆಯಾಗಲಿ ಎಂದು ಆಶಿಸೋಣವಲ್ಲವೇ….???