ಮಂಗಳೂರು,ಜ. 20; ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಸಜೀವ ಬಾಂಬ್ ನಿಷ್ಕ್ರಿಯಗೊಳಿಸಲು ಬೆಂಗಳೂರಿನಿಂದ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಕರಾವಳಿಗೆ ತೆರಳಿದ್ದರು. ಆದರೆ, ಪೊಲೀಸರು ಇದೀಗ ಸ್ಫೋಟಕವನ್ನು ನಿಷ್ಕ್ರಿಯಗೊಳಿಸುವ ಬದಲು ಸ್ಪೋಟಿಸುವ ಮೂಲಕ ಆತಂಕವನ್ನು ದೂರ ಮಾಡಿದ್ದಾರೆ.
ಈ ಸ್ಪೋಟಕವನ್ನು ಆರ್ಡಿಎಕ್ಸ್ ನಿಂದ ಸಿದ್ಧಪಡಿಸಿರುವ ಸುಧಾರಿತ ಸ್ಪೋಟಕ ಎಂದು ಊಹಿಸಲಾಗಿದ್ದು, ಇದನ್ನು ನಿಷ್ಕ್ರಿಯಗೊಳಿಸಲು ಮಂಗಳೂರಿನ ಕೆಂಜಾರ್ ಮೈದಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ನಿಷ್ಕ್ರಿಯಗೊಳಿಸುವ ಸಂದರ್ಭದಲ್ಲಿ ಬಾಂಬ್ ಸ್ಫೋಟಕ್ಕೊಳಗಾಗುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಅದನ್ನು ಸ್ಪೋಟಿಸಲು ಮುಂದಾಗಿತ್ತು.
ಕೆಂಜಾರೆ ಮೈದಾನದಲ್ಲಿ ಮರಳಿನ ಮೂಟೆಗಳ ನಡುವೆ ಬಾಂಬ್ ಇಟ್ಟು ಹೆಚ್ಚು ಅಪಾಯಕಾರಿಯಲ್ಲದ ರೀತಿಯಲ್ಲಿ ಸಂಜೆ 5.30ರ ಸುಮಾರಿಗೆ ಸ್ಪೋಟಕವನ್ನು ಸ್ಪೋಟಿಸಲಾಗಿದೆ. ಇದರಿಂದ ಯಾವುದೇ ಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.
ರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ:
ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಆಟೊ ರಿಕ್ಷಾದಲ್ಲಿ ಬಂದು ಸುಧಾರಿತ ಬಾಂಬ್‌ಗಳಿರುವ ಬ್ಯಾಗ್ ಅನ್ನು ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಅಧಿಕೃತವಾಗಿ ಆಟೊ ರಿಕ್ಷಾ ಮತ್ತು ಶಂಕಿತ ವ್ಯಕ್ತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಶಂಕಿತ ವ್ಯಕ್ತಿಯು ಆಟೊದಲ್ಲಿ ಬಂದು ಬ್ಯಾಗ್ ಇಟ್ಟು ಹೋಗಿರುವುದು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.