janadhvani

Kannada Online News Paper

CAA: ತಪ್ಪು ಗ್ರಹಿಕೆಯಿಂದಲ್ಲ, ಉತ್ತಮ ತಿಳುವಳಿಕೆಯಿಂದಲೇ ವಿರೋಧಿಸುತ್ತಿದ್ದೇವೆ- ಎ.ಪಿ.ಉಸ್ತಾದ್

ತಲಶ್ಶೇರಿ: ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಒಂದು ವಿಭಾಗದವರು ಮನೆಗಳು ಮತ್ತು ವೇದಿಕೆಗಳಲ್ಲಿ ತಪ್ಪು ಕಲ್ಪನೆಗಳನ್ನು ಹರಡುತ್ತಿದ್ದಾರೆ ಎಂದು ಅಖಿಲ ಭಾರತ ಸುನ್ನಿ ಜಮ್ಇಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.

ಅವರು ತಲಶ್ಶೇರಿಯಲ್ಲಿ ನಡೆದ ಸಂವಿಧಾನ ಸಂರಕ್ಷಣಾ ರ್ಯಾಲಿಯ ಅಧ್ಯಕ್ಷತೆ ವಹಿಸಿ, ಮಾತನಾಡಿ, ಜಾತಿ ಮತ್ತು ಧರ್ಮದ ಹೆಸರಿನಲ್ಲಿ ಪ್ರತ್ಯೇಕ ಕಾನೂನು ರಚಿಸಲು ಪ್ರಯತ್ನಿಸುತ್ತಿರುವಾಗ ನಾವು ಆ ಕಾನೂನನ್ನು ತಪ್ಪಾಗಿ ಅರ್ಥೈಸಿ, ವಿರೋಧಿಸುತ್ತಿದ್ದೇವೆ ಎಂದು ಕೆಲವರು ಪ್ರಚಾರಪಡಿಸುತ್ತಿದ್ದಾರೆ. ನಮಗೆ ಅದರ ಬಗ್ಗೆ ಯಾವುದೇ ತಪ್ಪು ಗ್ರಹಿಕೆ ಇಲ್ಲ.ಉತ್ತಮ ತಿಳುವಳಿಕೆ ಮತ್ತು ಜ್ಞಾನವಿದೆ ಎಂದು ಕಾಂತಪುರಂ ಹೇಳಿದರು.

ಭಾರತದಲ್ಲಿ ಎಲ್ಲಾ ಜಾತಿ ಮತ್ತು ವಿಚಾರವಾದಿಗಳಿಗೆ ಬದುಕಲು ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿದೆ ಮತ್ತು ಅದನ್ನು ರದ್ದುಗೊಳಿಸುವ ಪ್ರಯತ್ನವನ್ನು ಕೇಂದ್ರ ಸರಕಾರ ಪ್ರಾರಂಭದಿಂದಲೂ ಮಾಡುತ್ತಾ ಬಂದಿದೆ. ಮುಸ್ಲಿಮರನ್ನು ಮೂಲೆಗುಂಪು ಮಾಡಿ ಭಾರತವು ಒಂದು ನಿರ್ದಿಷ್ಟ ಪಂಥಕ್ಕೆ ಸೇರಿದೆ ಎಂಬ ವಾದವನ್ನು ಮಂಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ. ಅದನ್ನು ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಮುಸ್ಲಿಮರನ್ನು ಹೊರಗಿಟ್ಟ ಬಳಿಕ ಅವರು ಬೇರೊಂದು ವಿಭಾಗವನ್ನೂ ಹೊರಗಿಡುವುದರಲ್ಲಿ ಯಾವುದೇ ಸಂದೇಹವಿಲ್ಲ.

ತ್ರಿವಳಿ ತ್ವಲಾಕ್ ಕಾಯ್ದೆಯನ್ನೂ ಕಾನೂನು ಬಾಹಿರವಾಗಿ ಜಾರಿಗೊಳಿಸಲಾಯಿತು. ಸಾಮಾನ್ಯ ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದ ವಿಷಯವನ್ನು ಅಪರಾಧೀಕರಿಸಲಾಯಿತು. ನಂತರ ಕಾಶ್ಮೀರವನ್ನು ವಿಭಜನೆಗೊಳಿಸಿದರು. ಅಲ್ಲಿನ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದಾಗಲೂ ಭಾರತದ ಒಳಿತಿನ ದೃಷ್ಟಿಯಿಂದ ಸುಮ್ಮನಾದೆವು.

ಬಾಬರಿ ಮಸೀದಿ ತೀರ್ಪಿನಲ್ಲಿಯೂ ಮುಸ್ಲಿಮರಿಗೆ ಅನುಕೂಲಕರ ಸನ್ನಿವೇಶವನ್ನು ಸೃಷ್ಟಿಸಿ ಕೊನೆಗೆ ಅನ್ಯಾಧೀನಗೊಳಿಸಲಾಯಿತು. ತೀರ್ಪಿನ ನಂತರವೂ ಸಮುದಾಯದ ಮುಖಂಡರು ಪ್ರಚೋದಿತರಾಗದಂತೆ ಮತ್ತು ಯಾವುದೇ ಹಿಂಸಾಚಾರ ಮಾಡದಂತೆ ಕರೆ ನೀಡಿದ್ದರು. ಇದೀಗ ಹೊಸ ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಇದು ಸ್ಪಷ್ಟವಾಗಿ ಅಸಂವಿಧಾನಿಕವಾಗಿದ್ದು, ಅಂಗೀಕರಿಸವುದು ಖಂಡಿತ ಸಾಧ್ಯವಿಲ್ಲ ಎಂದು ಕಾಂತಪುರಂ ಹೇಳಿದರು.

error: Content is protected !! Not allowed copy content from janadhvani.com