ಬೆಳ್ತಂಗಡಿ: ಕೇಂದ್ರ ಸರ್ಕಾರದ ವಿವಾದಿತವೂ, ಅವೈಜ್ಞಾನಿಕವೂ, ಕುತ್ಸಿತವೂ ಆದ ಪೌರತ್ವ ಕಾನೂನಿನ ಕರಾಳ ಮುಖವನ್ನು ನೈಜ ಭಾರತೀಯರೆಲ್ಲರೂ ಕಟುವಾಗಿ ವಿರೋಧಿಸುತ್ತಿದ್ದು, ಬೆಳ್ತಂಗಡಿ ರೇಂಜ್ ಗೊಳಪಟ್ಟ ಹಿದಾಯತುಲ್ ಇಸ್ಲಾಂ ಸೆಕೆಂಡರಿ ಮದ್ರಸಾ ಜಾರಿಗೆಬೈಲು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ SBS ವತಿಯಿಂದಲೂ ಬೃಹತ್ ಪ್ರತಿಭಟನೆ ನಡೆಯಿತು.
ಮುಖ್ಯೋಪಾಧ್ಯಾಯ ಕೆ.ಎಂ. ಅಶ್ರಫ್ ಸಖಾಫಿ ಕುರ್ನಾಡು, ನೆರೆದ ವಿದ್ಯಾರ್ಥಿಗಳಿಗೆ ದೇಶಪ್ರೇಮದ ಕಾರಂಜಿಯನ್ನು ಪುಟಿದೇಳಿಸಿದ ಗತಮಹಾತ್ಮರಾದ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿ ದೇಶಪ್ರೇಮದ ಪಾಠವನ್ನು ಬೋಧಿಸಿದರು.
ಸೆಕ್ಯುಲರ್ ರಾಷ್ಟ್ರದಲ್ಲಿ ಹುಟ್ಟು ಪಡೆದು ಅದರ ಸಾಕ್ಷಾತ್ಕಾರಕ್ಕಾಗಿ ತೀವ್ರ ಪ್ರಯತ್ನ ಪಡುತ್ತಿರುವ ಕೋಮುವಾದೀ ಫ್ಯಾಸಿಸ್ಟರ ಅಜೆಂಡಾವನ್ನು ಬುಡದಿಂದಲೇ ಕಿತ್ತೊಗೆಯಲು ಎಲ್ಲಾ ಭಾರತೀಯ ಪ್ರಜೆಗಳು ಕಟಿಬದ್ಧರಾಗಬೇಕೆಂದು ಅವರು ಒತ್ತಿ ಹೇಳಿದರು.
ತದನಂತರ ನೆರೆದ ವಿದ್ಯಾರ್ಥಿಗಳೆಲ್ಲರೂ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸುತ್ತಾ ಸರಕಾರದ ಕ್ರೂರ ಕಾನೂನಿಗೆ, ಮತ್ತು ಸಂವಿಧಾನ ಬಾಹಿರತೆಗೆದುರಾಗಿ ಘೋಷಣೆ ಕೂಗಿದರು.
ಪ್ರತಿಭಟನಾ ಸಭೆಯಲ್ಲಿ SBS ಮುದಬ್ಬಿರ್ ರಿಯಾಝ್ ಬಾಹಸನಿ ಗೋಳಿಯಂಗಡಿ, ಕುಸುಮ-ಸುನ್ನತ್ ಮಾಸಿಕ ಪತ್ರಿಕೆಯ ಪ್ರಸಾರ ನಿರ್ವಾಹಕ ಅಬ್ದುರ್ರಝಾಖ್ ಸಅದಿ ಉರುವಾಲುಪದವು, ಬಂದ್ರ್ ಜುಮಾ ಮಸ್ಜಿದ್ ಉಪಾಧ್ಯಕ್ಷ ರಫೀಖ್ ಮುಸ್ಲಿಯಾರ್ ಜಾರಿಗೆಬೈಲು, SBS ವಿದ್ಯಾರ್ಥಿ ನಾಯಕರಾದ ಸುಝಾನ್, ಅರ್ಶದ್, ಅನಸ್ ಜಾರಿಗೆಬೈಲು ಮುಂತಾದವರು ಉಪಸ್ಥಿತರಿದ್ದರು.