janadhvani

Kannada Online News Paper

ಗಲಭೆ ನಿಲ್ಲಿಸಿದ್ರೆ ನಾಳೆ ವಿಚಾರಣೆ – ಸುಪ್ರೀಂ ಕೋರ್ಟ್

ನವದೆಹಲಿ,ಜ.9: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಆಲಿಘರ್ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಹಿಂಸಾಚಾರ ನಡೆದ ಘಟನೆಗೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ. ಆದರೆ ವಿದ್ಯಾರ್ಥಿಗಳು ಗಲಭೆ ನಿಲ್ಲಿಸಿದರೆ ಮಾತ್ರ ನ್ಯಾಯಾಲಯ ತನಿಖೆ ನಡೆಸಲು ಸಾಧ್ಯ ಎಂದು ಹೇಳಿದೆ.

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ಅವರ ನೇತೃತ್ವದ ನ್ಯಾಯಪೀಠ, ಪ್ರತಿಭಟನೆ ಹೆಸರಿನಲ್ಲಿ ಬಸ್ಸುಗಳಿಗೆ ಬೆಂಕಿ ಹಚ್ಚುವುದು, ಕಲ್ಲು ತೂರಾಟ ನಡೆಸುವುದು, ಗಲಭೆ ಎಬ್ಬಿಸುವುದು, ಸಾರ್ವಜನಿಕರಿಗೆ ತೊಂದರೆ ಮಾಡುವುದು ಇಂತಹ ವರ್ತನೆಗಳನ್ನು ನಿಲ್ಲಿಸಬೇಕು. ಪೊಲೀಸರು ಮತ್ತು ವಿದ್ಯಾರ್ಥಿಗಳು ಸಂಯಮ ಕಾಪಾಡಬೇಕು. ಗಲಭೆ ನಿಲ್ಲಿಸಿದರೆ ಮಾತ್ರ ನಾಳೆ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದೆ.

ಜಾಮಿಯಾ ಮತ್ತು ಆಲಿಘರ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯದ ಮುಂದೆ ಇಂದು ಹಾಜರಾದ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ಕೊಲಿನ್ ಗೊನ್ಸಲ್ವೆಸ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಪೀಠ, ರಸ್ತೆಗಿಳಿದು ಗಲಭೆ, ಹಿಂಸಾಚಾರದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರೆ ನ್ಯಾಯಾಲಯಕ್ಕೆ ಬರಬೇಡಿ, ವಿಚಾರಣೆ ನಡೆಸಲು ಈ ರೀತಿ ಬೆದರಿಕೆ ಹಾಕಿದರೆ ನಾವು ಕೇಳುವುದಿಲ್ಲ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು.

ವಿದ್ಯಾರ್ಥಿಗಳ ಪರ ಸುಪ್ರೀಂ ಕೋರ್ಟ್ ನಲ್ಲಿ ಹೇಳಿಕೆ ನೀಡಿದ ನ್ಯಾಯಾಧೀಶೆ ಇಂದಿರಾ ಜೈಸಿಂಗ್, ಪೊಲೀಸರು ಬಸ್ಸುಗಳಿಗೆ ಬೆಂಕಿ ಹಚ್ಚುತ್ತಿರುವಾಗ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಾಶ್ ರೂಂ ಒಳಗೆ ಅಡಗಿ ಕುಳಿತುಕೊಳ್ಳಬೇಕಾಯಿತು. ಬಸ್ಸುಗಳಿಗೆ ಬೆಂಕಿ ಹಚ್ಚಿದ್ದು ವಿದ್ಯಾರ್ಥಿಗಳು ಎಂದು ಸುಳ್ಳು ಆರೋಪ ಮಾಡಲಾಗಿದೆ. ಇಲ್ಲಿ ಯಾರೂ ಗಲಭೆಯನ್ನು ಪ್ರಚೋದಿಸಲಿಲ್ಲ. ವಿದ್ಯಾರ್ಥಿಗಳು ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದರು ಎಂದರು.

ಇದಕ್ಕೆ ಮುಖ್ಯ ನ್ಯಾಯಮೂರ್ತಿಗಳು, ಕಾನೂನು, ಸುವ್ಯವಸ್ಥೆಯನ್ನು ಉಲ್ಲಂಘಿಸಲು ಯಾರಿಗೂ ಅನುಮತಿ ಕೊಟ್ಟಿಲ್ಲ, ಸಂವಿಧಾನದಲ್ಲಿ ಶಾಂತಿಯುತ ಪ್ರತಿಭಟನೆಗೆ ಮಾತ್ರ ಅವಕಾಶವಿರುವುದು. ನಮಗೆಲ್ಲರಿಗೂ ನಿನ್ನೆ ಗಲಭೆ ಹೇಗಾಯಿತು, ಪರಿಸ್ಥಿತಿ ಇಷ್ಟು ವಿಕೋಪಕ್ಕೆ ಹೇಗೆ ಹೋಯಿತು ಎಂದು ಗೊತ್ತಿದೆ, ಇವೆಲ್ಲಾ ನಿಲ್ಲಬೇಕು, ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ನಾಶಮಾಡಿ ಇನ್ನೊಬ್ಬರಿಗೆ ತೊಂದರೆಕೊಟ್ಟು ಪ್ರತಿಭಟನೆ ಮಾಡುವುದೆಂದರೆ ಏನರ್ಥ ಎಂದು ಛೀಮಾರಿ ಹಾಕಿದರು.

ವಿದ್ಯಾರ್ಥಿಗಳು ಎಂದ ಮಾತ್ರಕ್ಕೆ ಕಾನೂನನ್ನು ತಮಗೆ ಬೇಕಾದಂತೆ ಕೈಗೆತ್ತಿಕೊಳ್ಳಲು ಸಾಧ್ಯವಿಲ್ಲ. ಯಾವುದೇ ಹಿಂಸಾತ್ಮಕ ಪ್ರತಿಭಟನೆ ನಡೆಯದಿದ್ದರೆ ನಾಳೆ ವಿಚಾರಣೆ ಕೈಗೆತ್ತಿಕೊಳ್ಳುತ್ತೇವೆ ಎಂದು ಹೇಳಿದರು.

error: Content is protected !! Not allowed copy content from janadhvani.com