janadhvani

Kannada Online News Paper

ಮೇಜರ್ ಜನರಲ್ ಹತ್ಯೆ: ಮುಂದಿನ ಪರಿಣಾಮಗಳಿಗೆ ಅಮೆರಿಕ ಹೊಣೆ- ಇರಾನ್ ಎಚ್ಚರಿಕೆ

ದುಬೈ,ಜ.3: ಮೇಜರ್ ಜನರಲ್ ಖಾಸಿಂ ಸುಲೈಮಾನಿಯನ್ನು ಅಮೆರಿಕ ಹತ್ಯೆ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಇರಾನ್ ಕೆಂಡಕಾರಿದೆ. ಇಂದೊಂದು ಮೂರ್ಖತನದ ನಿರ್ಧಾರ ಎಂದಿರುವ ಇರಾನ್, ಮುಂದಾಗುವ ಪರಿಣಾಮಗಳಿಗೆ ನೀವೇ ಕಾರಣ ಎಂದು ಹೇಳಿದೆ.

ಇರಾನ್ ಮೇಜರ್ ಜನರಲ್ ಖಾಸಿಂ ಸುಲೈಮಾನಿಯರ ಹತ್ಯೆ ನಂತರ ಮಾತನಾಡಿದ ಇರಾನ್ ವಿದೇಶಾಂಗ ಸಚಿವ ಮೊಹ್ಮದ್ ಜಾವದ್ ಜಾರಿಫ್, “ಅಮೆರಿಕ ಮೂರ್ಖ ಹಾಗೂ ಅತಿ ಅಪಾಯಕಾರಿ ನಿರ್ಧಾರ ಕೈಗೊಂಡಿದೆ. ಇದರಿಂದ ಉಂಟಾಗುವ ಪರಿಣಾಮಗಳ ಹೊಣೆಯನ್ನು ಅಮೆರಿಕವೇ ಹೊತ್ತುಕೊಳ್ಳಲಿ,” ಎಂದಿದ್ದಾರೆ. ಘಟನೆ ನಂತರದಲ್ಲಿ ಇರಾನ್ ಹಾಗೂ ಅಮೆರಿಕದ ನಡುವೆ ಯುದ್ಧ ಭೀತಿ ಎದುರಾಗಿದೆ. ಇನ್ನು, ಇರಾನ್ನಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಣೆ ಮಾಡಲಾಗಿದೆ.

ಶುಕ್ರವಾರ ಬಾಗ್ದಾದ್ ವಿಮಾನ ನಿಲ್ದಾಣದ ಸಮೀಪ ಅಮೆರಿಕ ರಾಕೆಟ್ ದಾಳಿ ನಡೆಸಿತ್ತು. ಈ ವೇಳೆ ಖಾಸಿಂ ಸುಲೈಮಾನಿ ಜತೆ ಇರಾಕ್ ಬೆಂಬಲಿತ ಹಶ್ದ್ ಪಡೆಯ ಡೆಪ್ಯುಟಿ ಕಮಾಂಡರ್ ಅಬು ಮಹ್ದಿ ಅಲ್ ಮುಹಂದಿಸ್ ಕೂಡ ಬಲಿಯಾಗಿದ್ದಾರೆ.

ಖಾಸಿಂ ಸುಲೈಮಾನಿರನ್ನು ಅಮೆರಿಕ ತನ್ನ ಬದ್ಧ ವೈರಿ ಎಂದೇ ಪರಿಗಣಿಸಿತ್ತು.ಇವರು ಇರಾನ್ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದರು. ಸುಲೈಮಾನಿ ಇರಾನ್ ಗುಪ್ತಚರ ಇಲಾಖೆಯ ಮುಖ್ಯಸ್ಥರು ಕೂಡ ಹೌದು. “ನಿಮಗೆ ಇಷ್ಟಬಂದಾಗ ನೀವು ಯುದ್ಧ ಆರಂಭಿಸಿ. ಆದರೆ, ಅದನ್ನು ಮುಗಿಸುವುದು ಮಾತ್ರ ನಾವೇ,” ಎಂದು ಸುಲೈಮಾನಿ ಅಮೆರಿಕಕ್ಕೆ ಬೆದರಿಕೆ ಹಾಕಿದ್ದರು. ಇವರನ್ನು ವಧಿಸಲು ಇದು ಕೂಡ ಒಂದು ಕಾರಣ ಎನ್ನಲಾಗಿದೆ.

error: Content is protected !! Not allowed copy content from janadhvani.com