ಬಾಗ್ದಾದ್, ಜ.3: ಇರಾಕ್ ರಾಜಧಾನಿ ಬಾಗ್ದಾದ್ ವಿಮಾನ ನಿಲ್ದಾಣ ಸಮೀಪ ಅಮೆರಿಕಾ ಶುಕ್ರವಾರ ನಸುಕಿನ ಜಾವ ನಡೆಸಿದ ಸ್ಟ್ರೈಕ್ ನಲ್ಲಿ ಇರಾನ್‌ನ ಪ್ರಭಾವಿ ಸೇನಾಧಿಕಾರಿ, ಸಿರಿಯಾ ಸೇರಿದಂತೆ ಹಲವು ದೇಶಗಳಲ್ಲಿ ಇರಾನ್‌ನ ಸಶಸ್ತ್ರ ಹೋರಾಟ ನಿಯಂತ್ರಿಸುತ್ತಿದ್ದ ಮೇಜರ್ ಜನರಲ್ ಖಾಸಿಂ ಸುಲೈಮಾನಿ,ಇರಾಕ್ ನ ಮಿಲಿಟರಿ ಪಡೆಯ ಉಪ ಮುಖ್ಯಸ್ಥ ಹಶದ್ ಅಲ್-ಶಾಬಿ, ಅಬು ಮಹ್ದಿ ಅಲ್ -ಮುಹಂದಿಸ್ ಸೇರಿ 8 ಮಂದಿ ಮೃತಪಟ್ಟಿದ್ದಾರೆ.
ಹಶದ್ ಹೆಚ್ಚಾಗಿ-ಶಿಯಾ ಸಶಸ್ತ್ರ ಘಟಕಗಳ ಜಾಲವಾಗಿದೆ, ಅವರಲ್ಲಿ ಹಲವರು ಟೆಹ್ರಾನ್‌ನೊಂದಿಗೆ ಬಹಳ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಇವರನ್ನು ಇರಾಕ್‌ನ ಭದ್ರತಾ ಪಡೆಗಳಲ್ಲಿ ಅಧಿಕೃತವಾಗಿ ಸೇರಿಸಿಕೊಳ್ಳಲಾಗಿದೆ. ಮುಹಂದಿಸ್ ಅವರು ಹಶದ್ ಅವರ ಉಪ ಮುಖ್ಯಸ್ಥರಾಗಿದ್ದು, ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿದ್ದರು. ಇವರನ್ನು ಅಮೆರಿಕಾ ಕಪ್ಪು ಪಟ್ಟಿಗೆ ಸೇರಿಸಿತ್ತು.
ಇರಾಕ್‌ನ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಿ ಇರಾನ್ ಬೆಂಬಲಿಗರು ಪ್ರತಿಭಟಿಸಿದ ಕೆಲವೇ ದಿನಗಳ ನಂತರ ಈ ದಾಳಿ ನಡೆದಿದ್ದು ಜಾಗತಿಕ ವಲಯದಲ್ಲಿ ಯುದ್ಧಭೀತಿ ಮೂಡಿಸಿದೆ.
ಅಮೆರಿಕ ಈಗಾಗಲೇ ಇರಾಕ್‌ನಲ್ಲಿರುವ ತನ್ನ ಸೇನಾಪಡೆಗಳಿಗೆ ಎಚ್ಚರದಿಂದ ಇರುವಂತೆ ಸೂಚಿಸಿದ್ದು, ಕುವೈತ್ ನೆಲೆಯಿಂದ ಇರಾಕ್‌ಗೆ 750 ಸೈನಿಕರನ್ನು ರವಾನಿಸಿದೆ. ಮಧ್ಯಪ್ರಾಚ್ಯದ ನೆಲೆಗಳಿಗೆ ಹೆಚ್ಚುವರಿಯಾಗಿ ಇನ್ನಷ್ಟು ತುಕಡಿಗಳನ್ನು ರವಾನಿಸಲು ಸಿದ್ಧತೆ ನಡೆಸಿದೆ ಎಂದು ಅಲ್‌ಜಝೀರಾ ಸುದ್ದಿವಾಹಿನಿಯ ಜಾಲತಾಣ ವರದಿ ಮಾಡಿದೆ.
ಇರಾಕ್ ಸೇನೆಯ ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿರುವ ಎಎಫ್‌ಪಿ ಸುದ್ದಿಸಂಸ್ಥೆ, ‘ಬಾಗ್ದಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂರು ರಾಕೆಟ್ ಬಾಂಬ್‌ಗಳು, ಎರಡು ಕಾರುಗಳು ಸ್ಫೋಟಗೊಂಡವು’ ಎಂದಷ್ಟೇ ಹೇಳಿದೆ.
ಎಎಫ್‌ಪಿ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿರುವ ಇರಾಕ್ ರಕ್ಷಣಾ ಇಲಾಖೆ ಅಧಿಕಾರಿಗಳು ‘ದಾಳಿಯಲ್ಲಿ ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ’ ಎಂದು ಹೇಳಿದ್ದಾರೆ.
ಯುದ್ಧ ಭೀತಿ
ಇರಾನ್ ಸೇನೆಯ ‘ಖದ್ಸ್’ ಪಡೆಯನ್ನು ಇರಾನ್ ಸೇನೆ ವಿದೇಶಗಳಲ್ಲಿ ಗುಪ್ತಚರ ಚಟುವಟಿಕೆ, ಅಸಾಂಪ್ರದಾಯಿಕ ಸಶಸ್ತ್ರ ಸಂಘರ್ಷ ನಿರ್ವಹಿಸಲೆಂದೇ ರೂಪಿಸಲಾಗಿದೆ. ಈ ಪಡೆಯ ಮುಖ್ಯಸ್ಥರಾಗಿದ್ದವರು ಮೇಜರ್ ಜನರಲ್ ಖಾಸಿಂ ಸುಲೈಮಾನಿ.
ಬಾಗ್ದಾದ್ ವಿಮಾನ ನಿಲ್ದಾಣದ ಮೇಲೆ ಅಮೆರಿಕ ನಡೆಸಿದ ದಾಳಿಯಲ್ಲಿ ಅಮೆರಿಕದ ಕಟು ಟೀಕಾಕಾರಾಗಿದ್ದ ಸುಲೈಮಾನಿ ಜೊತೆಗೆ ಇರಾನ್ ಪರವಾಗಿದ್ದ ಇರಾಕ್‌ನ ಸಶಸ್ತ್ರ ಸಂಘಟನೆಯ ಕಮಾಂಡರ್ ಅಬು ಮಹ್ದಿ ಅಲ್ ಮುಹನ್ದಿಸ್ ಸಹ ಮೃತಪಟ್ಟಿದ್ದಾರೆ.
‘ಈ ದಾಳಿಯನ್ನು ಅಮೆರಿಕ ಸೇನೆಯೇ ನಿರ್ವಹಿಸಿದೆ’ ಎಂದು ರಾಯಿಟರ್ಸ್ ವರದಿ ಮಾಡಿದೆ.
‘ಇದು ಐಸಿಸ್ ಉಗ್ರರ ಹಿಡಿತದಿಂದ ಇರಾಕ್–ಸಿರಿಯಾ ಮುಕ್ತವಾದ ನಂತರ ಮಧ್ಯಪ್ರಾಚ್ಯದಲ್ಲಿ ನಡೆದಿರುವ ಮಹತ್ವದ ಬೆಳವಣಿಗೆ. ಇರಾನ್ ಸೇನೆ ಮತ್ತು ಇರಾಕ್ ಸೇರಿದಂತೆ ವಿಶ್ವದ ಹಲವೆಡೆ ಇರುವ ಇರಾನ್ ಪರ ಹೋರಾಟಗಾರರು ಸುಲೈಮಾನಿ ಅವರನ್ನು ಗೌರವಿಸುತ್ತಾರೆ. ಈ ದಾಳಿಗೆ ಇರಾನ್ ಪ್ರತೀಕಾರ ತೀರಿಸಿಕೊಳ್ಳಬಹುದು ಎಂಬ ಆತಂಕ ವ್ಯಕ್ತವಾಗುತ್ತಿದೆ’ ಎಂದು ಅಲ್‌ಜಝೀರಾ ಸುದ್ದಿವಾಹಿನಿ ಅಭಿಪ್ರಾಯಪಟ್ಟಿದೆ.
ಅಮೆರಿಕದಲ್ಲಿ ಭಿನ್ನಾಭಿಪ್ರಾಯ
‘ನಿಮಗೆ ಬೇಕು ಎನಿಸಿದಾಗ ಯುದ್ಧ ಆರಂಭಿಸಿ, ಅದನ್ನು ಮುಗಿಸುವುದು ಮಾತ್ರ ನಾವೇ’ ಎಂದು ಅಮೆರಿಕಗೆ ಬೆದರಿಕೆ ಹಾಕಿದ್ದ ಇರಾನ್‌ನ ಮೇಜರ್ ಜನರಲ್ ಸುಲೈಮಾನಿಯನ್ನು ಅಮೆರಿಕ ತನ್ನ ಶತ್ರು ಎಂದೇ ಪರಿಗಣಿಸಿತ್ತು. ಆದರೆ ಸುಲೈಮಾನಿಯನ್ನು ಅಮೆರಿಕ ಸೇನೆ ಕೊಂದಿರುವ ರೀತಿಗೆ ತವರು ನೆಲದಲ್ಲಿಯೇ ಅಧ್ಯಕ್ಷ ಟ್ರಂಪ್‌ಗೆ ಆಕ್ಷೇಪಗಳು ವ್ಯಕ್ತವಾಗಿವೆ.
ಈ ಕುರಿತು ಟ್ವೀಟ್ ಮಾಡಿರುವ ಸೆನೆಟರ್ ಕ್ರಿಸ್ ಮರ್ಫಿ, ‘ಕಾಂಗ್ರೆಸ್‌ನ (ಸಂಸತ್ತು) ಅನುಮೋದನೆಯೇ ಇಲ್ಲದೆ ಇರಾನ್‌ನ ಎರಡನೇ ಅತಿದೊಡ್ಡ ಪ್ರಭಾವಿಯನ್ನು ಕೊಂದಿದ್ದು ಸರಿಯೇ? ಮತ್ತೊಂದು ಜಿದ್ದಿನ ಪ್ರಾದೇಶಿಕ ಯುದ್ಧಕ್ಕೆ ಇದು ಮುನ್ನುಡಿಯಲ್ಲವೇ?’ ಎಂದು ಪ್ರಶ್ನಿಸಿದ್ದಾರೆ.