ಸುಳ್ಯ: ಮುಸ್ಲಿಂ ಹಿತರಕ್ಷಣಾ ವೇದಿಕೆ ಸುಳ್ಯ ತಾಲೂಕು ಇದರ ವತಿಯಿಂದ ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ತಿದ್ದುಪಡಿ ಕಾಯ್ದೆ( NRC, CAA) ವಿರೋಧಿಸಿ ನಗರದ ಗಾಂಧೀನಗರ ಪೆಟ್ರೋಲ್ ಬಂಕ್ ಬಳಿ ಬೃಹತ್ ಶಾಂತಿಯುತ ಪ್ರತಿಭಟನಾ ಸಮಾವೇಶವು ನಡೆಯಿತು.
ಹಿತರಕ್ಷಣಾ ವೇದಿಕೆ ಸುಳ್ಯ ಇದರ ಅಧ್ಯಕ್ಷರಾದ ಇಸಾಕ್ ಹಾಜಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾವೇಶವನ್ನು ಸಯ್ಯದ್ ಝೈನುಲ್ ಆಬಿದೀನ್ ತಂಗಳ್ ದುಗಲಡ್ಕ ಇವರು ಉದ್ಘಾಟಿಸಿದರು.
ಮಾಧ್ಯಮಗಳು ನೀಡಿದ ತೀರ್ಪಿನ ಆಧಾರದಲ್ಲಿ ಒಂದು ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಪೊಲೀಸ್ ಇಲಾಖೆಯ ಪ್ರವೃತ್ತಿ ಕ್ರೌರ್ಯತನದ್ದು ಎಂದು ಸಾಮಾಜಿಕ ಚಿಂತಕ ಭಾಸ್ಕರ ಪ್ರಸಾದ್ ಹೇಳಿದ್ದಾರೆ.
ಈ ಎರಡೂ ಕಾಯಿದೆಗಳು ಮುಠಾಳತನದ್ದು. ದೇಶದ್ರೋಹಿಗಳು ಮಾತ್ರ ಇಂತಹ ಕಾನೂನು ತರಲು ಸಾಧ್ಯ ಎಂದವರು ಹೇಳಿದರು.
ಇಡೀ ಜಗತ್ತಿನಲ್ಲೇ ನಾಯಕನಿಲ್ಲದೆ, ವ್ಯಕ್ತಿ ಮುಖವಿಲ್ಲದೆ ರಾಷ್ಷ್ರ ಧ್ವಜದ ಅಡಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಸಂವಿಧಾನದ ಪಥದಲ್ಲೇ ಇಂತಹ ಪ್ರತಿಭಟನೆ ನಡೆಸಿ ಫಲ ಪಡೆಯೋಣ ಎಂದು ಸಾಮಾಜಿಕ ಚಿಂತಕ ನಿಕೇತ್ ರಾಜ್ ಮೌರ್ಯ ಹೇಳಿದ್ದಾರೆ.
ಧರ್ಮಗಳ ನಡುವೆ ಗೋಡೆ ಕಟ್ಟುವವರು ದೇಶ ದ್ರೋಹಿಗಳು, ಸೇತುವೆ ಕಟ್ಟುವವರು ದೇಶಪ್ರೇಮಿಗಳು. ಸಮಾಜದಲ್ಲಿ ವಿಷ ಬೀಜ ಬಿತ್ತುವವರ ಷಡ್ಯಂತ್ರ ಅರಿಯಬೇಕು ಎಂದರು.
ಮುಸ್ಲಿಂ ಸಮುದಾಯದವರ ದೇಶ ಪ್ರೇಮದ ಬಗ್ಗೆ ಇತಿಹಾಸವೇ ಹೇಳುತ್ತಿದೆ, ಗಾಂಧೀಜಿಯ ಕಾಲದಿಂದಲೇ ಅವರ ದೇಶ ಪ್ರೇಮಕ್ಕೆ ಸಾಕ್ಷಿಗಳಿವೆ, ನಾವೆಲ್ಲರೂ ಒಂದಾಗಿ ಹೋರಾಡಿ ಈ ಎರಡನೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಜಯಿಗಳಾಗೋಣ ಎಂದು ಹೇಳಿದರು.
ರಾಜ್ಯ SSF ಉಪಾಧ್ಯಕ್ಷ ಸುಫಿಯಾನ್ ಸಖಾಫಿ ಕಾವಲ್ಕಟ್ಟೆಯವರು ಮಾತನಾಡಿ ಪೌರತ್ವ ಕಾಯ್ದೆಯ ವಿರುದ್ಧ ದೇಶದಾದ್ಯಂತ ಆಕ್ರೋಶಗಳು ಬುಗಿಲೇಳುತ್ತಿದ್ದು, ಪಂಚರ್ ಹಾಕುವವರು ಮಾತ್ರವಲ್ಲ ಬೀದಿಗಿಳಿದಿದ್ದು ಈ ನಾಡಿನ ಉನ್ನತ ಜಡ್ಜ್ ಗಳು, ಡಾಕ್ಟರ್ ಗಳು, ವಕೀಲರ್ ಗಳು, ವಿಶ್ವವಿಧ್ಯಾಲಯಗಳ ವಿಧಿಯಾರ್ಥಿಗಳು, ಸಾಮಾಜಿಕ ಹೋರಾಟಗಾರರು, ಈ ನಾಡಿನ ಬಗ್ಗೆ ಚೆನ್ನಾಗಿ ಅರಿತವರು ಕೂಡಾ ಪೌರತ್ವ ಕಾಯ್ದೆಯ ವಿರುದ್ಧ ಹೋರಾಡುತ್ತ, ಸಂವಿಧಾನವನ್ನು ಸಂರಕ್ಷಣೆ ಮಾಡಿ ಎಂಬ ಉದಾತ್ತವಾದ ಘೋಷಣೆಯೊಂದಿಗೆ ಬೀದಿಯಲ್ಲಿದ್ದಾರೆ. ಇವತ್ತು ಭಾರತೀಯರಿಗೆ ನಿದ್ಧೆಯಿಲ್ಲ, ಒಂದು ಕಡೆ ಉಧ್ಯೋಗವಿಲ್ಲದೆ ರಾಜ್ಯದಲ್ಲಿ ಜನರು ಪರದಾಡುತ್ತಿದ್ದಾರೆ,ಇನ್ನೊಂದು ಕಡೆಯಲ್ಲಿ ಬಡತನದಲ್ಲಿ ಮುಳುಗಿ ಒಂದೊತ್ತಿನ ಅನ್ನಕ್ಕೆ ಗತಿಯಿಲ್ಲದೆ ದಿಕ್ಕುಪಾಲಗುತ್ತಿದ್ದಾರೆ, ಭರವಸೆಗಳ ಮೇಲೆ ಸುಳ್ಳು ಭರವಸೆಯನ್ನು ನೀಡಿ ಕೇಂದ್ರವು ಜನರನ್ನು ವಂಚಿಸುತ್ತಿದ್ದಾರೆ ಎಂದು ಹೇಳಿದರು.
ಅಡ್ವಕೇಟ್ ಹನೀಫಿ ಹುದವಿ ಮಾತನಾಡಿ ಈ ರಾಜ್ಯದಲ್ಲಿ ಎಲ್ಲರೂ ಸೌಹಾರ್ಧತೆಯಿಂದ ಬದುಕುತ್ತಿದ್ದಾರೆ, ಪೌರತ್ವವೆಂಬ ಕಾಯ್ದೆಯನ್ನು ಜಾರಿಗೆ ತಂದು ಈ ರಾಷ್ಟ್ರದ ಜನರನ್ನು ತ್ರಿವರ್ಣ ಪತಾಕೆಯಡಿಯಲ್ಲಿ ಒಂದು ಸೇರುವ ಹಾಗೆ ಮಾಡಿದ್ದೀರಿ, ಪೌರತ್ವವೆಂಬ ಹೆಸರು ಹೇಳಿ ಈ ರಾಜ್ಯದ ಮುಸ್ಲಿಂ ಸಮುದಾಯವನ್ನು ಭಯಬೀತನ್ನಾಗಿಸುವ ಕನಸು ಕಂಡಿದ್ದರೆ ಅದು ಸಾಧ್ಯವಿಲ್ಲ ಎಂದರು, ಪೌರತ್ವವನ್ನು ಕೇಳಿ ಯಾರಾದರು ಬಂದರೆ ಅದನ್ನು ತಿಳಿಯಪಡಿಸಲು ನಾವು ಸಿದ್ಧರಲ್ಲ ನಾವು ಅದರ ವಿರುದ್ಧ ಹೋರಾಟವನ್ನು ಮುಂದುವರೆಸುವೆವು ಎಂದರು.
ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಬಂದಂತಹ ಕೆಪಿಸಿಸಿ ಮಾಜಿ ಕಾರ್ಯದರ್ಶಿಗಳಾದ ವೆಂಕಪ್ಪ ಗೌಡ, ಭರತ್ ಮುಂಡೋಡಿ, ಎಸ್‍ಡಿಪಿಐ ಜಿಲ್ಲಾ ಮುಖಂಡ ಇಕ್ಬಾಲ್ ಬೆಳ್ಳಾರೆ, ಕಾರ್ಮಿಕ ಸಂಘಟನೆ ಮುಖಂಡರಾದ ಕೆ.ಪಿ.ಜಾನಿ, ಜಿ.ಪಂ.ಮಾಜಿ ಸದಸ್ಯ ಧನಂಜಯ ಅಡ್ಪಂಗಾಯ, ಆಮ್ ಆದ್ಮಿ ಪಕ್ಷದ ಮುಖಂಡ ಅಶೋಕ್ ಎಡಮಲೆ, ಬೆಳ್ಳಾರೆ ಮಸೀದಿ ಧರ್ಮಗುರು ಯೂನುಸ್ ಸಖಾಫಿ, ಗಾಂಧಿನಗರ ಮಸೀದಿ ಧರ್ಮಗುರು ಅಶ್ರಫ್ ಖಾಮಿಲ್ ಸಖಾಫಿ, ನೂರುದ್ದೀನ್ ಸಾಲ್ಮರ ಮೊದಲಾದವರು ಮಾತನಾಡಿದರು.
ವೇದಿಕೆಯಲ್ಲಿ ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ, ಸಿಪಿಎಂ ಮುಖಂಡ ರಾಬರ್ಟ್ ಡಿಸೋಜ,, ಕೆಪಿಸಿಸಿ ಸದಸ್ಯ ಡಾ.ರಘು, ನ್ಯಾಯವಾದಿ ಕುಂಞಿಪಳ್ಳಿ, ಸಿದ್ದಿಕ್ ಕೊಕ್ಕೋ, ಮಹಮ್ಮದ್ ಕುಂಞಿ ಗೂನಡ್ಕ, ಜಿ.ಕೆ.ಹಮೀದ್, ಮಜೀದ್ ಅಡ್ಕಾರ್, ಅಝೀಝ್ ಬುಶ್ರಾ, ಇಕ್ಬಾಲ್ ಎಲಿಮಲೆ, ಮಹಮ್ಮದ್ ಫವಾಝ್, ಅಬ್ದುಲ್ ಕಲಾಂ, ಹರಿಪ್ರಸಾದ್ ಕೆ.ಕೆ, ನಗರ ಪಂಚಾಯಿತಿ ಸದಸ್ಯರಾದ ಶರೀಫ್ ಕಂಠಿ, ಕೆ.ಎಸ್.ಉಮ್ಮರ್, ರಿಯಾಝ್ ಕಟ್ಟೆಕ್ಕಾರ್, ಕೆ.ಎಂ. ಮುಸ್ತಫ, ಅದಂಕುಂಞಿ ಕಮ್ಮಾಡಿ, ತಾ.ಪಂ. ಸದಸ್ಯ ಅಬ್ದುಲ್ ಗಫೂರ್ ಮೊದಲಾದವರು ಉಪಸ್ಥಿತರಿದ್ದರು.
ವರದಿ: ಕೆಎಸ್ಎಮ್ ಎಲಿಮಲೆ