janadhvani

Kannada Online News Paper

ಮುಸ್ಲಿಮರ ಹಕ್ಕುಗಳನ್ನು ರಕ್ಷಿಸಬೇಕು- ಮೋದಿಯ ಭಾಷಣದ ಕೆಲವೇ ಗಂಟೆಗಳಲ್ಲಿ ಇಸ್ಲಾಮಿಕ್ ದೇಶಗಳ ಒಕ್ಕೂಟ ಆಗ್ರಹ

ರಿಯಾದ್: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಅಯೋಧ್ಯೆ ತೀರ್ಪಿನಿಂದಾಗಿ ಭಾರತೀಯ ಮುಸ್ಲಿಮರು ಬಾಧಿತರಾಗಬಹುದಾದ ಬೆಳವಣಿಗೆಗಳ ಕುರಿತಂತೆ ಇಸ್ಲಾಮಿಕ್ ದೇಶಗಳ ಒಕ್ಕೂಟ (ಒಐಸಿ) ತನ್ನ ಕಳವಳ ವ್ಯಕ್ತಪಡಿಸಿದೆಯಲ್ಲದೆ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯ ತೋರಬಾರದೆಂದು ಹೇಳುವ ಅಂತರಾಷ್ಟ್ರೀಯ ಕಾನೂನನ್ನು ಭಾರತ ಎತ್ತಿ ಹಿಡಿಯಬೇಕೆಂದು ಅದು ಹೇಳಿದೆ. ಗಲ್ಫ್ ರಾಷ್ಟರಗಳು ಸಮೇತ 57 ಮುಸ್ಲಿಂ ದೇಶಗಳ ಒಕ್ಕೂಟವಾಗಿದೆ ಒಐಸಿ.

ರವಿವಾರ ರಾಜಧಾನಿ ದಿಲ್ಲಿಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ಮುಸ್ಲಿಂ ದೇಶಗಳಲ್ಲಿ ಮೋದಿ ಅಷ್ಟು ಜನಪ್ರಿಯರಾಗಿದ್ದಾರೆ, ನನ್ನ ಆಡಳಿತಾವಧಿಯಲ್ಲಿ ಕೊಲ್ಲಿಯ ಜೈಲಿನಿಂದ ನಮ್ಮ ಪ್ರಜೆಗಳನ್ನು ಬಿಡುಗಡೆ ಗೊಳಿಸಲಾಗಿದೆ” ಎಂದು ಹೇಳುವ ಮೂಲಕ ಮುಸ್ಲಿಂ ರಾಷ್ಟ್ರಗಳು CAB ವಿಷಯದಲ್ಲಿ ಮಧ್ಯಪ್ರವೇಶ ಮಾಡದು ಎಂದು ಸೂಚಿಸಿದ್ದರು.

“ಪಾಕಿಸ್ತಾನದ ಜತೆಗೆ ಶಾಂತಿಗಾಗಿ ಕೈಚಾಚಿದರೂ ದ್ರೋಹ ಎಸಗಲಾಯಿತು. ಆದರೆ ಇತರ ಮುಸ್ಲಿಂ ರಾಷ್ಟ್ರಗಳ ಜತೆ ನಮ್ಮ ಸಂಬಂಧ ಉತ್ತಮವಾಗಿದೆ. ಮೋದಿ ಮುಸ್ಲಿಂ ರಾಷ್ಟ್ರಗಳಲ್ಲಿ ಜನಪ್ರಿಯರಾಗಿದ್ದರೆ. ಭಾರತೀಯ ಮುಸ್ಲಿಮರಲ್ಲಿ ಭಯ ಹುಟ್ಟಿಸುವ ತನ್ನ ಕೆಲಸ ಮುಂದುವರಿಸಲು ಸಾಧ್ಯವಿಲ್ಲವೆಂದು ಕಾಂಗ್ರೆಸ್ ತಿಳಿದಿದೆ. ಇಂತಹವರನ್ನು ನಂಬಬೇಡಿ” ಎಂದು ಮೋದಿ ಹೇಳಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಒಐಸಿ ಜನರಲ್ ಸೆಕ್ರಟೇರಿಯಟ್ ಹೇಳಿಕೆ ಬಿಡುಗಡೆಗೊಳಿಸಿ ಭಾರತದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರನ್ನು ಬಾಧಿಸುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವುದಾಗಿ ಹೇಳಿದೆ.

ಭಾರತದಲ್ಲಿ ಮುಸ್ಲಿಮರ ಸುರಕ್ಷತೆ ಹಾಗೂ ಇಸ್ಲಾಮಿಕ್ ಪವಿತ್ರ ಸ್ಥಳಗಳ ರಕ್ಷಣೆಗೆ ಅದು ಆಗ್ರಹಿಸುತ್ತದೆ ಎಂದು ಒಐಸಿ ಪತ್ರಿಕಾ ಹೇಳಿಕೆ ತಿಳಿಸಿದೆ.

“ಯಾವುದೇ ಬೇಧಭಾವವಿಲ್ಲದೆ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಬೇಕೆಂಬ ವಿಶ್ವಸಂಸ್ಥೆಯ ನಿಯಮಾವಳಿಗಳನ್ನು ಎತ್ತಿ ಹಿಡಿಯಬೇಕು. ಈ ನಿಟ್ಟಿನಲ್ಲಿ ಏನಾದರೂ ಉಲ್ಲಂಘನೆಯಾದರೆ ಅದು ಉದ್ವಿಗ್ನತೆಗೆ ಕಾರಣವಾಗಿ ಪ್ರಾಂತ್ಯದಲ್ಲಿ ಶಾಂತಿ ಹಾಗೂ ಸುರಕ್ಷತೆಯ ಮೇಲೆ ಗಂಭೀರ ಪರಿಣಾಮ ಬೀರಬಹುದು” ಎಂದು ಒಐಸಿ ಹೇಳಿಕೆ ತಿಳಿಸಿದೆ.

error: Content is protected !! Not allowed copy content from janadhvani.com