ಪೇಶಾವರ್ ,ಡಿಸೆಂಬರ್ .17; ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ಅವರಿಗೆ ಅಲ್ಲಿನ ಪೇಶಾವರ ವಿಶೇಷ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪಾಕಿಸ್ತಾನದ ಮಾಜಿ ಸೇನಾಧಿಕಾರ ಪರ್ವೇಜ್ ಮುಷರಫ್ ಅವರ ಮೇಲಿದ್ದ ದೀರ್ಘ ಕಾಲದ ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ತೀರ್ಪು ನೀಡಿರುವ ಪೇಶಾವರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಾಕರ್ ಅಹ್ಮದ್ ಸೇಠ್ ನೇತೃತ್ವದ ವಿಶೇಷ ನ್ಯಾಯಾಲಯದ ತ್ರಿಸದಸ್ಯ ಪೀಠ, ಪ್ರರಕಣಕ್ಕೆ ಸಂಬಂಧಿಸಿದಂತೆ ಮುಷರಫ್ ಅವರನ್ನು ಆರೋಪಿ ಎಂದು ಘೋಷಿಸಿದೆ. ಅಲ್ಲದೆ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಪರ್ವೇಜ್ ಮುಷರಫ್ 2007ರಲ್ಲಿ ಸರ್ವಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಸಮಯದಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಭುಗಿಲೆದ್ದಿತ್ತು. ಇಂತಹ ಪರಿಸ್ಥಿತಿ ನಿರ್ವಹಣೆ ಸಂದರ್ಭದಲ್ಲಿ ಮುಷರಫ್ ಸಾಕಷ್ಟು ದೇಶದ್ರೋಹ ಎಸಗಿದ್ದಾರೆ ಎಂದು ಆರೋಪಿಸಿ 2013ರ ಡಿಸೆಂಬರ್ನಲ್ಲಿ ಅವರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿತ್ತು.
ಪ್ರಕರಣದ ಕುರಿತು ವಿಚಾರಣೆ ನಡೆಸಿದ್ದ ಪಾಕಿಸ್ತಾನದ ವಿಶೇಷ ತನಿಖಾ ಅಧಿಕಾರಿಗಳು ಮಾರ್ಚ್ 31 2014ರಲ್ಲಿ ಮುಷರಫ್ ವಿರುದ್ಧ ದೋಷಾರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅದೇ ವರ್ಷ ಪ್ರಾಸಿಕ್ಯೂಷನ್ ಮುಷರಫ್ ವಿರುದ್ಧದ ಸಂಪೂರ್ಣ ಸಾಕ್ಷಿಯನ್ನು ವಿಶೇಷ ನ್ಯಾಯಾಲಯದ ಎದುರು ಮಂಡಿಸಿತ್ತು. ಈ ಕುರಿತ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಮುಷರಫ್ 2016ರಲ್ಲಿ ಪಾಕಿಸ್ತಾನದಿಂದ ಪಲಾಯನ ಮಾಡಿದ್ದರು.
2016ರಲ್ಲಿ ದೇಶ ತೊರೆದಿದ್ದ ಮುಷರಫ್ ಇದೀಗ ದುಬೈನಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಪಾಕಿಸ್ತಾನ ಸರ್ಕಾರ ಮುಷರಫ್ ಅವರನ್ನು ಮತ್ತೆ ತನ್ನ ದೇಶಕ್ಕೆ ಕರೆತರುವಲ್ಲಿ ಯಶಸ್ವಿಯಾಗುತ್ತಾ? ನ್ಯಾಯಾಲಯದ ತೀರ್ಪಿನಂತೆ ಅವರನ್ನು ಗಲ್ಲಿಗೆ ಏರಿಸುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಪಾಕಿಸ್ತಾನ ಸೇನೆಯ ಸೇನಾಧಿಕಾರಿಯಾಗಿದ್ದ ಮುಷರಫ್ 1999 ರಿಂದ 2008ರ ವರೆಗೆ ಪಾಕಿಸ್ತಾನದ ಸರ್ವಾಧಿಕಾರಿಯಾಗಿ ಅಧಿಕಾರ ನಡೆಸಿದ್ದರು. ಭಾರತ ಮತ್ತು ಪಾಕಿಸ್ತಾನದ ನಡುವೆ ಕಾರ್ಗಿಲ್ ಯುದ್ಧ ಇವರ ಕಾಲದಲ್ಲೇ ನಡೆದಿತ್ತು ಎಂಬುದು ಉಲ್ಲೇಖಾರ್ಹ.ಅಲ್ಲದೆ, ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗುತ್ತಿರುವ ಮೊದಲ ರಾಜಕೀಯ ನಾಯಕ ಇವರಲ್ಲ. ಇದಕ್ಕೂ ಮೊದಲು ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ಜುಲ್ಪೀಕರ್ ಅಲಿ ಬುಟ್ಟೋ ಅವರನ್ನು ದೋಷಿ ಎಂದು ಘೋಷಿಸಿದ್ದ ನ್ಯಾಯಾಲಯ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. 1979 ಏಪ್ರಿಲ್ 04 ರಂದು ಜುಲ್ಪೀಕರ್ ಅಲಿ ಬುಟ್ಟೋ ಅವರನ್ನು ಗೆಲ್ಲಿಗೇರಿಸಲಾಗಿತ್ತು.