janadhvani

Kannada Online News Paper

ಉಮ್ರಾ ಯಾತ್ರಿಕರಿಗಾಗಿ ಸಮಗ್ರ ಆರೋಗ್ಯ ವಿಮೆ ಯೋಜನೆ ಜಾರಿ

ರಿಯಾದ್: ವಿದೇಶೀಯರಾದ ಉಮ್ರಾ ಯಾತ್ರಿಕರಿಗೆ ಸಮಗ್ರ ಆರೋಗ್ಯ ವಿಮೆ ಯೋಜನೆಯನ್ನು ಹಜ್ ಉಮ್ರಾ ಸಚಿವಾಲಯ ಜಾರಿಗೊಳಿಸಿದ್ದು, ತಆವೂನಿಯಾ ವಿಮಾ ಕಂಪನಿಯ ಸಹಕಾರದೊಂದಿ ಈ ಯೋಜನೆ ಕಾರ್ಯನಿರ್ವಹಿಸಲಿವೆ.

ಆರೋಗ್ಯ ಸೇವೆಗಳ ಜೊತೆಗೆ, ವಿಮಾನ ನಿಲ್ದಾಣಗಳಲ್ಲಿ ಎದುರಾಗುವ ವಿವಿಧ ಪ್ರಯಾಣ ಸಮಸ್ಯೆಗಳಿಗೆ ಕೂಡ ವಿಮಾ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸೌದಿ ಅರೇಬಿಯಾ ಯಾತ್ರೆ ಪ್ರಾರಂಭದಿಂದ, ಸೌದಿ ತೊರೆಯುವ ಅವಧಿಗೆ ಇದರ ಪ್ರಯೋಜನ ಲಭ್ಯವಾಗಲಿದೆ. ಆರೋಗ್ಯ ಸೇವೆಗಳ ಜೊತೆಗೆ, ಈ ಯೋಜನೆಯು ಹಲವಾರು ಪ್ರಯೋಜನಗಳನ್ನು ಸಹ ನೀಡಲಿದೆ.

ಪ್ರತಿ ಯಾತ್ರಿಕನು ಒಂದು ತಿಂಗಳ ಪಾಲಿಸಿಗೆ 189 ರಿಯಾಲ್‌ಗಳನ್ನು ಪಾವತಿಸಬೇಕಾಗುತ್ತದೆ. ಇದು 1 ಲಕ್ಷ ರೂ.ವರೆಗೆ ವೈದ್ಯಕೀಯ ಸಹಾಯವನ್ನು ಒದಗಿಸುತ್ತದೆ ಮತ್ತು ತೀರ್ಥಯಾತ್ರೆಯ ಸಮಯದಲ್ಲಿ ತುರ್ತು ಪರಿಸ್ಥಿತಿಗಳು, ವಿಪತ್ತುಗಳು ಮತ್ತು ತುರ್ತು ಆರೋಗ್ಯ ಸಮಸ್ಯೆಗಳಿಗೆ ರಕ್ಷಣೆ ನೀಡಲಿದೆ. ಇದಲ್ಲದೆ, ವಿಮಾನ ವಿಳಂಬಕ್ಕೆ 500 ರಿಯಾಲ್‌ಗಳವರೆಗೂ, ರದ್ದುಗೊಂಡರೆ 5,000 ರಿಯಾಲ್‌ಗಳವರೆಗೆ ಪರಿಹಾರವನ್ನು ಯೋಜನೆಯು ಒದಗಿಸುತ್ತದೆ. ಒಂದು ವೇಳೆ ಮರಣಹೊಂದಿದರೆ ಮೃತದೇಹವನ್ನು ಊರಿಗೆ ತಲುಪಿಸುವ ಸಲುವಾಗಿ 10,000 ರಿಯಾಲ್ ವರೆಗೆ ಸಹಾಯ ಲಭಿಸಲಿದ್ದು, ಅಪಘಾತ ಮರಣ ಸಂಭವಿಸಿದಾಗ, ಒಂದು ಲಕ್ಷದ ವರೆಗೆ ಪರಿಹಾರ ಲಭಿಸಲಿದೆ.

ಹೆಚ್ಚುವರಿಯಾಗಿ, ವಿಮಾನ ನಿಲ್ದಾಣಗಳಲ್ಲಿ ಹೆಚ್ಚು ಸಮಯ ಕಾಯಬೇಕಾಗಿ ಬಂದಾಗ ಮತ್ತು ಸಾಮಾನುಗಳನ್ನು ಕಳೆದುಕೊಂಡಾಗ ವಿಮಾ ರಕ್ಷಣೆಯನ್ನು ಪಡೆಯಬಹುದಾಗಿದೆ. ಅಗತ್ಯವಿದ್ದರೆ ಒಂದು ತಿಂಗಳಿಗೆ ವಿಮೆಯನ್ನು ವಿಸ್ತರಿಸುವ ಆಯ್ಕೆಯೂ ಇದೆ. ಸಹಾಯ ಕೇಂದ್ರಗಳು ವಿವಿಧ ಭಾಷೆಗಳಲ್ಲಿ ಪೂರ್ಣ ಸಮಯದ ಕರೆ ಕೇಂದ್ರಗಳು ಮತ್ತು ಸೇವಾ ಕೇಂದ್ರಗಳನ್ನು ಹೊಂದಿರುತ್ತವೆ.

ಸೌದಿ ಆರೋಗ್ಯ ಸಚಿವಾಲಯದ ಅಡಿಯಲ್ಲಿ ಅಥವಾ ಆರೋಗ್ಯ ವಿಮಾ ಮಂಡಳಿಯ ಮಾನ್ಯತೆ ಪಡೆದ ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಪಾಸ್‌ಪೋರ್ಟ್‌ಗಳ ಮೂಲಕ ಯಾತ್ರಾರ್ಥಿಗಳು ವಿಮಾ ಸೌಲಭ್ಯವನ್ನು ಪಡೆಯಬಹುದು.