janadhvani

Kannada Online News Paper

ಪೌರತ್ವ ಮಸೂದೆ: ಸುಪ್ರೀಂ ಮೆಟ್ಟಲೇರಿದ ಮುಸ್ಲಿಂ ಲೀಗ್

ನವದೆಹಲಿ,ಡಿ.12: ದೇಶದಾದ್ಯಂತ ವಿವಾದಕ್ಕೆ ಈಡಾಗಿರುವ ನೂತನ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಇಂದು ಸುಪ್ರೀಂ ಕೋರ್ಟ್ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ . ಈ ಮೂಲಕ ಸಂಸತ್ ನ ಲೋಕಸಭೆ ಹಾಗೂ ರಾಜ್ಯಸಭೆ ಎರಡರಲ್ಲೂ ಬಹುಮತದಿಂದ ಒಪ್ಪಿಗೆ ಪಡೆದ ಮಸೂದೆ ತನ್ನ ಮೊದಲ ಕಾನೂನಾತ್ಮಕ ಸವಾಲನ್ನು ಎದುರಿಸುವಂತಾಗಿದೆ.

ಧರ್ಮ ಆಧಾರಿತ ಪೌರತ್ವವನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರ್ಕಾರ ಸಂವಿಧಾನದ 14ನೇ ವಿಧಿಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ. ಹೀಗಾಗಿ ಸಂಸತ್ನಲ್ಲಿ ಅಂಗೀಕಾರವಾಗಿರುವ ನೂತನ ಪೌರತ್ವ ತಿದ್ದುಪಡಿ ಮಸೂದೆಯನ್ನು ತಮ್ಮ ಸಂಘಟನೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಲಿದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಈ ಹಿಂದೆಯೇ ಸ್ಪಷ್ಟಪಡಿಸಿತ್ತು.

ಸಂಸದರಾದ ಪಿ.ಕೆ.ಕುಞಾಲಿ ಕುಟ್ಟಿ,ಇ.ಟಿ.ಬಶೀರ್ ಸಹಿತವಿರುವ ನಾಯಕರು ಸುಪ್ರೀಂ ಕೋರ್ಟನಲ್ಲಿ ನೇರವಾಗಿ ಅರ್ಜಿಯನ್ನು ಸಲ್ಲಿಸಿದರು. ಹಿರಿಯ ವಕೀಲ ಮತ್ತು ಕಾಂಗ್ರೆಸ್ ಮುಖಂಡರಾದ ಕಪಿಲ್ ಸಿಬಲ್ ಮುಸ್ಲಿಂ ಲೀಗ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ.

ಪೌರತ್ವ ತಿದ್ದುಪಡಿ ಮಸೂದೆ ಸಂವಿಧಾನದ ಮೂಲ ತತ್ವಗಳಿಗೆ ವಿರುದ್ಧವಾಗಿದೆ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಪಿ.ಕೆ.ಕುಞಾಲಿ ಕುಟ್ಟಿ ಸಂಸದರು, ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ತನ್ನ ನಾಗರಿಕರ ಒಂದು ವಿಭಾಗವನ್ನು ಮಾತ್ರ ಹೊರಗಿಡಲು ಶಾಸನ ರಚಿಸಲಾಗಿದೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದಂತೆ ಬುಧವಾರ ಭಾರತೀಯ ಇತಿಹಾಸದಲ್ಲಿ ಕರಾಳ ದಿನವಾಗಿತ್ತು. ಧರ್ಮದ ಹೆಸರಿನಲ್ಲಿರುವ ವಿಭಜನೆ ದೇಶಕ್ಕೆ ವಿಪತ್ತು, ನಾಳೆ ಭಾಷೆ, ಬಣ್ಣ ಮತ್ತು ಸ್ಥಳೀಕರಣದ ಆಧಾರದ ಮೇಲೆ ತಾರತಮ್ಯ ಉಂಟಾಗಬಹುದು.

ಮಸೂದೆಯ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ವ್ಯಕ್ತವಾಗಿದೆ ಮತ್ತು ಅದನ್ನು ಸದನದಲ್ಲಿ ಅಂಗೀಕರಿಸಲಾಗಿದೆ ಎಂಬ ಮಾತ್ರಕ್ಕೆ ಜಾರಿಗೆಳಿಸಬಹುದೆಂದು ಭಾವಿಸುವುದು ಬೇಡ ಎಂದ ಕುಞಾಲಿ ಕುಟ್ಟಿ, ಅರ್ಜಿಗೆ ಕೋರ್ಟ್ ನಿಂದ ಅನುಕೂಲಕರ ತೀರ್ಪು ಲಭಿಸುವ ನಿರೀಕ್ಷೆ ಇದೆ ಎಂದರು.