ವಿಶ್ವಸಂಸ್ಥೆ, ಡಿ.11: ಪೌರತ್ವ ತಿದ್ದುಪಡಿ ಮಸೂದೆ ಭಾರತದ ಸಂಸತ್ತಿನಲ್ಲಿ ಅಂಗೀಕಾರ ಪಡೆದಿರುವ ಕುರಿತಂತೆ ಪ್ರತಿಕ್ರಿಯಿಸಲು ವಿಶ್ವಸಂಸ್ಥೆ ನಿರಾಕರಿಸಿದೆ.ಪೌರತ್ವ ತಿದ್ದುಪಡಿ ಮಸೂದೆ ಅಲ್ಲಿಯ ಸಂಸತ್ತಿನಲ್ಲಿ ಅಂಗೀಕಾರ ಪಡೆದಿರುವುದು ಸಂಸತ್ ವ್ಯವಹಾರಗಳ ಭಾಗವಾಗಿದ್ದು ಆ ಕುರಿತಂತೆ ವಿಶ್ವಸಂಸ್ಥೆ ಪ್ರತಿಕ್ರಿಯಿಸುವುದಿಲ್ಲ. ನಮ್ಮ ಗಮನ ಒಂದು ವೇಳೆ ಈ ಮಸೂದೆ ಹಿನ್ನೆಲೆಯಲ್ಲಿ ಸರ್ಕಾರ ತಾರತಮ್ಯ ನೀತಿ ಅನುಸರಿಸುವುದರ ಮೇಲೆ ಮಾತ್ರ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್, ಅವರ ಉಪ ವಕ್ತಾರೆ ಫರಾನ್ ಹಕ್ ಹೇಳಿದ್ದಾರೆ.
ಸಂಸತ್ತಿನಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಮಂಡಿಸಿ ಅಂಗೀಕಾರ ಪಡೆದಿದ್ದ ಗೃಹ ಸಚಿವ ಅಮಿತ್ ಷಾ ವಿರುದ್ಧ ಅಮೇರಿಕಾ ನಿರ್ಬಂಧ ಏರಬೇಕು ಎಂದು ಶಿಫಾರಸ್ಸು ಮಾಡಿದ್ದ ಅಮೇರಿಕಾ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಆಯೋಗದ ಕ್ರಮವನ್ನು ಈಗಾಗಲೇ ಭಾರತ ಖಂಡಿಸಿದ್ದು ಇದು ಪೂರ್ವಾಗ್ರಹ ಪೀಡಿತ ಹಾಗೂ ತಲೆಬುಡವಿಲ್ಲದ ಶಿಫಾರಸ್ಸು ಎಂದಿದೆ. ಸೋಮವಾರ ಮಸೂದೆಗೆ ಸಂಸತ್ ಅಂಗೀಕಾರ ನೀಡುತ್ತಿದ್ದಂತೆಯೇ ಅಮೇರಿಕಾ ಸರ್ಕಾರದ ಧಾರ್ಮಿಕ ಸ್ವಾತಂತ್ರ್ಯ ಆಯೋಗ ಅಮಿತ್ ಶಾ ವಿರುದ್ಧ ನಿರ್ಬಂಧ ಏರಬೇಕೆಂದು ಅಲ್ಲಿಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು.
ಪೌರತ್ವ ತಿದ್ದುಪಡಿ ಮಸೂದೆ ಸೋಮವಾರ ಸಂಸತ್ನಲ್ಲಿ 311/80 ಬಹುಮತದೊಂದಿಗೆ ಅಂಗೀಕಾರ ಪಡೆದಿತ್ತು. ಮಸೂದೆ ಪರವಾಗಿ 311 ಮತ್ತು ವಿರೋಧವಾಗಿ 80 ಮತಗಳು ಬಿದ್ದಿದ್ದವು. ಬಿಜೆಪಿಯ ಮೈತ್ರಿ ಪಕ್ಷಗಳಾದ ಜೆಡಿಯು ಮತ್ತು ಶಿವಸೇನೆಯು ಮಸೂದೆಗೆ ಬೆಂಬಲ ನೀಡಿದ್ದವು.
ಇಂದು ಈ ಮಸೂದೆ ರಾಜ್ಯ ಸಭೆಯಲ್ಲಿ ಮಂಡನೆಯಾಗಿದೆ. ರಾಜ್ಯ ಸಭೆಯ ಒಟ್ಟು ಸದಸ್ಯರು 245 ಇದ್ದು, ಅಂಗೀಕಾರಕ್ಕೆ 123 ಮತಗಳು ಅಗತ್ಯವಿದೆ. ಈ ಮ್ಯಾಜಿಕ್ ಸಂಖ್ಯೆಯನ್ನು ತಲುಪಲು ಆಡಳಿತರೂಢ ಬಿಜೆಪಿ ಮಿತ್ರ ಪಕ್ಷಗಳ ಇತರ ಪಕ್ಷಗಳ ಮನವೊಲಿಕೆಗೆ ಎಲ್ಲ ರೀತಿಯ ಯತ್ನಗಳಲ್ಲಿ ತೊಡಗಿದೆ. ಹಾಗೂ ತಿದ್ದುಪಡಿಗೆ ಅಂಗೀಕಾರ ಪಡೆಯುವ ವಿಶ್ವಾಸವನ್ನು ಹೊಂದಿದೆ.