janadhvani

Kannada Online News Paper

ಜಮ್ಮು- ಕಾಶ್ಮೀರ: ಸೇನಾ ಪಡೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧಾರ

ಶ್ರೀನಗರ: ಸಂವಿಧಾನದ 370ನೇ ಕಲಂ ರದ್ಧತಿಗೂ ಮುನ್ನಾ ಜುಲೈ ಕೊನೆಯ ವಾರದಿಂದ ಕಣಿವೆ ರಾಜ್ಯ ಜಮ್ಮು- ಕಾಶ್ಮೀರದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿರುವ ಹೆಚ್ಚುವರಿ ಸೇನಾ ಪಡೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದೆ.ಕಣಿವೆ ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಿರುವುದನ್ನು ಗಮನಿಸಿ ಹೆಚ್ಚುವರಿ ಸೇನೆಯನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಾರಾಮುಲಾ, ಬಂಡಿಪೊರಾ ಮತ್ತಿತರ ಪ್ರದೇಶಗಳಲ್ಲಿ ನಿಯೋಜಿಸಲಾಗಿದ್ದ ಅರಸೇನಾ ಪಡೆಯ 300 ತುಕಡಿಯಲ್ಲಿ 20 ಮಂದಿ ಈಗಾಗಲೇ ಕಣಿವೆ ರಾಜ್ಯ ತೊರೆದಿದ್ದಾರೆ. ಹಂತ ಹಂತವಾಗಿ ಸೇನೆಯನ್ನು ಹಿಂಪಡೆಯಲಾಗುವುದು. ಆದರೆ, ಪೂರ್ಣ ಪ್ರಮಾಣದ ಸೇನೆಯ ಹಿಂತೆಗೆತಕ್ಕೆ ಯಾವುದೇ ಸಮಯದ ಮಿತಿಯಿಲ್ಲ . ಆದಾಗ್ಯೂ, ಪರಿಸ್ಥಿತಿಯನ್ನು ನೋಡಿಕೊಂಡು ಮತ್ತೆ ನಿಯೋಜಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಪೊಂಚ್ ವಲಯವನ್ನು ಹೊರತುಪಡಿಸಿದಂತೆ ಜಮ್ಮು ವಲಯದಿಂದ ಬಹುತೇಕ ಅರಸೇನಾ ಪಡೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಸೇನೆಯ ಭದ್ರತೆ ನೀಡಲಾಗಿದೆ. ಹೆಚ್ಚುವರಿ ಬಿಎಸ್ ಎಫ್ ಹಾಗೂ ಸಿಆರ್ ಪಿಎಫ್ ಯೋಧರನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪರಿಸ್ಥಿತಿಯನ್ನು ಗಮನಿಸಲಾಗುತ್ತಿದೆ. ಮರು ನಿಯೋಜನೆ ಕೂಡಾ ಪರಿಸ್ಥಿತಿಯೊಂದಿಗೆ ನೇರ ಸಂಬಂಧ ಹೊಂದಿದೆ. ಒಂದು ವೇಳೆ ಹೆಚ್ಚುವರಿ ಸೇನಾ ಸಿಬ್ಬಂದಿ ಅವಶ್ಯಕತೆ ಇಲ್ಲ ಎಂದು ಅನಿಸಿದರೆ ಹೆಚ್ಚುವರಿ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳಲಾಗುವುದು ಎಂದು ಸಿಆರ್ ಪಿಎಫ್ ವಕ್ತಾರರು ತಿಳಿಸಿದ್ದಾರೆ.

error: Content is protected !! Not allowed copy content from janadhvani.com