ರಿಯಾದ್: ಒಂದೇ ವೀಸಾದಲ್ಲಿ ಸೌದಿ ಮತ್ತು ಯುಎಇಗೆ ಭೇಟಿ ನೀಡುವ ಕ್ರಮವು ಜಾರಿಯಾಲಿದೆ. ಯುರೋಪಿಯನ್ ದೇಶಗಳಲ್ಲಿನ ಷೆಂಗೆನ್ ವೀಸಾದಂತೆಯೇ ಜಂಟಿ ವೀಸಾಗಳನ್ನು ನೀಡಲು ಸೌದಿ ಮತ್ತು ಯುಎಇ ಮುಂದಾಗಿವೆ. ಈ ಯೋಜನೆ ಮುಂದಿನ ವರ್ಷದಿಂದ ಜಾರಿಗೆ ಬರಲಿದ್ದು, ಸೌದಿ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಮತ್ತು ಅಬುಧಾಬಿ ಪ್ರಿನ್ಸ್ ಶೈಖ್ ಮುಹಮ್ಮದ್ ಬಿನ್ ಝಾಯಿದ್ ಆಲ್ ನಹ್ಯಾನ್ ಅವರ ಅಧ್ಯಕ್ಷತೆಯಲ್ಲಿ ಸೌದಿ ಅರೇಬಿಯಾ ಮತ್ತು ಯುಎಇ ಸಮನ್ವಯ ಸಮಿತಿಯ ಎರಡನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಸೌದಿಯ ಪ್ರವಾಸೋದ್ಯಮ ಮತ್ತು ರಾಷ್ಟ್ರೀಯ ಪರಂಪರೆಯ ಆಯೋಗ ಮತ್ತು ಯುಎಇ ಹಣಕಾಸು ಸಚಿವಾಲಯ ಈ ಬಗ್ಗೆ ಕ್ರಮ ಕೈಗೊಳ್ಳಲಿದೆ. ಜಂಟಿ ವೀಸಾ ಅನುದಾನ ಮುಂದಿನ ವರ್ಷದಿಂದ ಪ್ರಾರಂಭವಾಗಲಿದೆ ಎಂದು ಯುಎಇ ಆರ್ಥಿಕ ವ್ಯವಹಾರಗಳ ಸಚಿವ ಸುಲ್ತಾನ್ ಅಲ್ ಮನ್ಸೂರಿ ತಿಳಿಸಿದ್ದಾರೆ. ಇದು ಎರಡೂ ದೇಶಗಳ ಪ್ರವಾಸಿಗರ ಸಂಖ್ಯೆಯನ್ನು ಹೆಚ್ಚಿಸುತ್ತದೆ ಮತ್ತು ರಾಷ್ಟ್ರೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಕೊಡುಗೆಯನ್ನು ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.
ಯುಎಇಗೆ ವಾರ್ಷಿಕವಾಗಿ 2.2 ಕೋಟಿಗೂ ಹೆಚ್ಚು ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಾರೆ ಎಂದು ಅಂದಾಜಿಸಲಾಗಿದೆ. ಅಂಕಿಅಂಶಗಳ ಪ್ರಕಾರ, ಹಜ್ ಮತ್ತು ಉಮ್ರಾ ಯಾತ್ರಿಕರು ಸೇರಿದಂತೆ ಸುಮಾರು ಎರಡು ಕೋಟಿ ಜನರು ವಾರ್ಷಿಕವಾಗಿ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ. ಉಭಯ ದೇಶಗಳಿಗೆ ಭೇಟಿ ನೀಡಲು ಬಯಸುವ ವಿದೇಶಿ ಪ್ರವಾಸಿಗರಿಗೆ, ಜಂಟಿ ವೀಸಾ ತುಂಬಾ ಪ್ರಯೋಜನಕಾರಿಯಾಗಿದೆ.