janadhvani

Kannada Online News Paper

ಹಾಫಿಳ್ ತೌಸೀಫ್: ಚಿಕ್ಕ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿ ಬೇಗ ಹೋಗಿಬಿಟ್ಟ ಆ ಸನ್ಮಿತ್ರ!!

ಹಾಫಿಲ್ ತೌಸೀಫ್ ಹಿಮಮಿ ದಫನ ನಾಳೆ(21/11/19) ಬೆಳಗ್ಗೆ 9ಗಂಟೆಗೆ ಆಲಡ್ಕದಲ್ಲಿ

✍ ಹಾಫಿಲ್ ಸುಫ್ಯಾನ್ ಸಖಾಫಿ

ನಂಬಲಾಗುತ್ತಿಲ್ಲ! ಸ್ನಿಗ್ಧ ಮುಖದ ಮುಗ್ಧ ಸ್ವಭಾವದ ಪ್ರತಿಭಾವಂತ ಮಿತ್ರ, ಒಂದೇ ಭೇಟಿಯಲ್ಲಿ ಎಂಥವರನ್ನೂ ತನ್ನವರನ್ನಾಗಿಸುವ ಆಕರ್ಷಕ ವ್ಯಕ್ತಿತ್ವದ ಹಾಫಿಲ್ ತೌಸೀಫ್ ಹಿಮಮಿ ಅಲ್ ಅಫ್ಳಲಿ ಇಂದು ಅಪಘಾತದಲ್ಲಿ ನಿಧನರಾದರು! ಇನ್ನಾಲಿಲ್ಲಾಹ್…
ಇಂದು ಮಗ್ರಿಬ್‌ನ ಸಮಯದಲ್ಲಿ ಅಲ್ ಖಾದಿಸಾದ ನನ್ನ ರೂಮಿನಲ್ಲಿ ಇರುವಾಗ ಉಸ್ತಾದ್ ವಿಷಯ ಏನಾದ್ರೂ ಸಿಕ್ಕಿತಾ ಎಂದು ಹೇಳಿಕೊಂಡು ನಮ್ಮ ಮುದರ್ರಿಸ್ ಜಿಎಂ ಶಫೀಕ್ ಸಖಾಫಿ ಬಂದಾಗ ಅಚ್ಚರಿಯಿಂದ ಏನೆಂದು ಕೇಳಿದೆ. ಆಗ ಕನ್ಫರ್ಮ್ ಆಗಿರಲಿಲ್ಲ. ಆದರೆ ನಂತರ ಬಂದ ಆ ಫೋಟೋ ನನ್ನನ್ನು ಒಮ್ಮೆ ಸ್ಥಬ್ದವಾಗಿಸಿತು!!

ಕುರ್ ಆನ್ ಕಂಠಪಾಠ ಮಾಡಿ ಮುಹಿಮ್ಮಾತಿನಲ್ಲಿ ಹಿಮಮಿ ಪದವಿ ರ್ಯಾಂಕ್ ನೊಂದಿಗೆ ಪಡೆದು ಅಫ್ಲಲ್ ಸಅದಿ ಪದವಿಯನ್ನೂ ಪ್ರಥಮ ರ್ಯಾಂಕ್ ನೊಂದಿಗೆ ಪಡೆದು ರಾಜ್ಯಕ್ಕೆ ಹೆಮ್ಮೆಯಾಗಿದ್ದ ತೌಸೀಫ್ ಹಿಮಮಿಯ ವಿಯೋಗ ಕರುನಾಡ ದಅವಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ!
ವಿನಯದ ಪ್ರತಿರೂಪವಾಗಿದ್ದ ತೌಸೀಫ್ ಹಿಮಮಿ ಸದಾ ತಗ್ಗಿಬಗ್ಗಿ ನಡೆಯುವ ಮನುಷ್ಯ. ಅಪಾರ ಜ್ಞಾನವಿದ್ದರೂ ಅದ್ಯಾವುದೂ ತೋರ್ಪಡಿಸದೆ ಜೀವಿಸಿದ ವಿನಯಾನ್ವಿತ. ಅಂದೊಮ್ಮೆ ಮುಹಿಮ್ಮಾತಿನಲ್ಲಿ ಅವರ ಉಸ್ತಾದ್ ಇತರ ಶಿಷ್ಯರೊಂದಿಗೆ ಹೇಳಿದ್ದರಂತೆ ‘ನೀವು ತೌಸೀಫಿನಂತೆ ಆಗಬೇಕೆಂದು!!’

ನಾನು ಮುಹಿಮ್ಮಾತಿನಲ್ಲಿ ಹಿಫ್ಲ್ ಕಲಿಯುತ್ತಿದ್ದ ಸಂದರ್ಭದಲ್ಲಾಗಿತ್ತು ತೌಸೀಫ್ ಹಿಮಮಿ ಮುಹಿಮ್ಮಾತಿಗೆ ಬಂದದ್ದು. ಕಂಡಾಗಲೆಲ್ಲಾ ಸ್ನಿಗ್ಧ ನಗುವಿನೊಂದಿಗೆ ಮಾತನಾಡುತ್ತಿದ್ದ ತೌಸೀಫ್ ಹಿಮಮಿಯ ಮುಖ ಈಗಲೂ ಕಣ್ಣಮುಂದೆ ತೇಲಿ ಬರುತ್ತಿದೆ. ನಾನು ಹಾಗೂ ಸನ್ಮಿತ್ರ ಕೆ.ಎಂ ಮುಸ್ತಫಾ ನಈಮಿ, ಕೆಕೆ ಅಶ್ರಫ್ ಸಖಾಫಿ ಹರಿಹರ, ಹಾಫಿಲ್ ಅಶ್ರಫ್ ಸಖಾಫಿ ಕಕ್ಕಿಂಜೆ ಸಹಿತವಿರುವ ನಮ್ಮ ತಂಡ ಉತ್ತರ ಕರ್ನಾಟಕಕ್ಕೆ ಹೋಗಲು ತೀರ್ಮಾನಿಸಿದ ಸಂದರ್ಭದಲ್ಲಿ ಹನ್ನೆರಡು ಜನರುಳ್ಳ ದಅವಾ ಸೆಲ್ ಎಂಬ ಸಮಿತಿ ರಚಿಸಿದ್ದೆವು. ಅದರ ಮೂಲಕ ವಾಗಿತ್ತು ನಮ್ಮ ಉತ್ತರ ಕರ್ನಾಟಕದ ಪರ್ಯಟನೆ ಆರಂಭಗೊಂಡಿದ್ದು. ಈ ಹನ್ನೆರಡರ ಸಮಿತಿಯಲ್ಲಿ ನಮ್ಮ ತೌಸೀಫ್ ಹಿಮಮಿ ಸಕ್ರೀಯರಾಗಿದ್ದರು!!.

ಈಗ ಮಂಗಳೂರು ಕೇಂದ್ರವಾಗಿರಿಸಿ ಕೊಂಡು ದಅವಾ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ತೌಸೀಫ್ ಹಿಮಮಿ ಹಲವು ಭಾಷೆಗಳನ್ನು ನಿರರ್ಗಳವಾಗಿ ಮಾತನಾಡಬಲ್ಲ ಪ್ರತಿಭಾವಂತ ವ್ಯಕ್ತಿ ಇಂದು ಮೌನವಾಗಿ ಮಲಗಿದ್ದಾರೆ.

ಹೃಸ್ವವಾದ ಆಯುಸ್ಸಿನಲ್ಲಿ ಬಹಳಷ್ಟು ಸಾಧನೆಮಾಡಿ ಹಲವು ಸಜ್ಜನರ, ಉಲಮಾಗಳ, ಮುತಅಲ್ಲಿಂಗಳ ಮನಸ್ಸಲ್ಲಿ ಸ್ಥಾನ ಹಿಡಿದು, ರಬೀವುಲ್ ಅವ್ವಲಿನ ಪವಿತ್ರ ತಿಂಗಳಲ್ಲಿ ಅವರೆಲ್ಲರನ್ನೂ ಬಿಟ್ಟು, ತನ್ನ ಪ್ರೀಯ ಪತ್ನಿ ಹಾಗೂ ಪುಟ್ಟ ಎರಡು ಮಕ್ಕಳನ್ನೂ ಬಿಟ್ಟು ಎಲ್ಲರನ್ನೂ ಕಣ್ಣೀರಲ್ಲಿ ಮುಳುಗಿಸಿ ಇಂದು ಸಂಜೆ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ!! ಇನ್ನಾಲಿಲ್ಲಾಹ್… ಈ ಇಹವನ್ನು ಹೇಗೆ ನಂಬುವುದು ಹೇಳಿ? ಒಬ್ಬರ ಹಿಂದೆ ಒಬ್ಬರಂತೆ ಸಜ್ಜನರನೇಕರು ನಮ್ಮನ್ನು ಅಗಲುತ್ತಿದ್ದಾರೆ.‌ ಅಲ್ಲಾಹು ನಮಗೂ ನಮ್ಮವರಿಗೂ ದೀರ್ಘಾಯುಷ್ಯ ಪೂರ್ಣ ಆರೋಗ್ಯ ನೀಡಿ ಅನುಗ್ರಹಿಸಲಿ-ಆಮೀನ್

ಈ ದುರಂತಗಳು ನಮಗೆ ಹಲವು ಪಾಠಗಳನ್ನು ಕಲಿಸುತ್ತಿದೆ. ಅಮಿತ ವೇಗದ ವಾಹನ ಚಾಲನೆ, ಅದರಲ್ಲೂ ದ್ವಿಚಕ್ರ ವಾಹನ ಚಾಲನೆಯ ವೇಳೆಯೆಲ್ಲಾ ತುಂಬಾನೇ ಸೂಕ್ಷ್ಮತೆ ಪಾಲಿಸಬೇಕಿದೆ. ಅಲ್ಪ ಎಚ್ಚರ ತಪ್ಪಿದರೂ ದೊಡ್ಡ ದುರಂತಗಳಿಗೆ ಕಾರಣವಾಗಬಹುದು. ಅಲ್ಲಾಹು ಕಾಪಾಡಲಿ – ಅಮೀನ್

ನಾನು ನಾಳೆ ಮುಂಜಾನೆ 8.30ಗಂಟೆಯ ಏರ್ ಇಂಡಿಯಾ ವಿಮಾನ ಮೂಲಕ ಒಮಾನ್ ಕೆಸಿಎಫ್ ಮೀಲಾದ್ ಕಾನ್ಫರೆನ್ಸ್ ಗಾಗಿ ತೆರಳುತ್ತಿದ್ದೇನೆ. ಮಧ್ಯೆ ಮಿತ್ರ ಹಾಫಿಲ್ ತೌಸೀಫ್ ಹಿಮಮಿಯ ಮನೆಗೂ ಹೋಗಬೇಕಿದೆ. ಸನ್ಮಿತ್ರನನ್ನು ಕೊನೆಯದಾಗಿ ಒಮ್ಮೆ ಕಂಡು ಬೀಳ್ಕೊಡಬೇಕಿದೆ. ನಿಜಕ್ಕೂ ಅರಗಿಸಿ ಕೊಳ್ಳಲು ಆಗುತ್ತಿಲ್ಲ. ಮಿತ್ರ ಮುಸ್ತಫಾ ನಈಮಿ ಯವರಿಗೆ ಕರೆ ಮಾಡಿದಾಗ ನಿಯಂತ್ರಿಸಲಾಗದೆ ಬಿಕ್ಕಿಬಿಕ್ಕಿ ಅತ್ತುಬಿಟ್ಟರು. ಹೌದು ನಮ್ಮ ತೌಸೀಫ್ ಹಿಮಮಿ ಹಲವರನ್ನು ಕಣ್ಣೀರಲ್ಲಿ ಮುಳುಗಿಸಿ ಯಾತ್ರೆಯಾಗುತ್ತಿದ್ದಾರೆ. ಒಂದಂತೂ ಗ್ಯಾರಂಟಿ ತೌಸೀಫ್ ಹಿಮಮಿ ನನ್ನನ್ನು ನೋಯಿಸಿದರು ಎಂದು ಹೇಳಲು ಭೂಲೋಕದಲ್ಲಿ ಯಾರೂ ಇರಲಿಕ್ಕಿಲ್ಲ! ಅಷ್ಟೊಂದು ಮುಗ್ಧ ಸ್ವಭಾವದ ಅನುಗ್ರಹೀತ ಬದುಕದು. ಇಂದಿಗೆ ಕೊನೆಗೊಳ್ಳುತ್ತಿದೆ. ಅಲ್ಲಾಹು ಕಲಿತ ಕುರ್ ಆನ್ ಹಾಗೂ ಇಲ್ಮಿನ ಪ್ರತಿಯೊಂದು ಗೆರೆಗಳ ಪ್ರತಿಫಲ ಪರಲೋಕದಲ್ಲಿ ಸಂತೋಷದಿಂದ ಅನುಭವಿಸಲು ತೌಫೀಕ್ ನೀಡಲಿ -ಆಮೀನ್ ಪ್ರತಿಭಾವಂತ ಮನದಿನಿಯನನ್ನು ಕಳಕೊಂಡ ಆ ಪತ್ನಿ ಹಾಗೂ ಕುಟುಂಬಕ್ಕೆ ಅಲ್ಲಾಹು ಸ್ವಬರ್ ನೀಡಿ ಅನುಗ್ರಹಿಸಲಿ, ನಮ್ಮೆಲ್ಲರನ್ನೂ ಸ್ವರ್ಗದಲ್ಲಿ ಸಂತೋಷದಿಂದ ಒಟ್ಟುಗೂಡಿಸಲಿ-ಆಮೀನ್
ಸಾಧ್ಯವಾಗುವ ಎಲ್ಲಾ ಕಾರ್ಯಕರ್ತರು ನಾಳೆ ಬೆಳಗ್ಗೆ 8ಗಂಟೆಗೆ ಆಲಡ್ಕದಲ್ಲಿ ನಡೆಯುವ ಮಿತ್ರನ ಅಂತ್ಯಕ್ರಿಯೆಗಳಲ್ಲಿ ಭಾಗವಹಿಸಿ, ಮಯ್ಯಿತ್ ನಮಾಝ್ ಮಾಡಿಸಿ, ತಹ್ಲೀಲ್ ಸಮರ್ಪಿಸಿ ದುಆ ಮಾಡಿ.

✍ ಹಾಫಿಲ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ
(ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)

error: Content is protected !! Not allowed copy content from janadhvani.com