janadhvani

Kannada Online News Paper

ಖತಾರ್: ಒಪ್ಪಂದ ನೆಲೆನಿಂತಿರುವಾಗಲೇ ಕೆಲಸ ಬದಲಾವಣೆ ಸುಲಭ

ದೋಹಾ: ಒಪ್ಪಂದ ನೆಲೆನಿಂತಿರುವಾಗಲೇ ಮತ್ತೊಂದು ಉದ್ಯೋಗಕ್ಕೆ ಪರಿವರ್ತನೆಗೊಳ್ಳಲು ಸಾಧ್ಯವಾಗುವಂತಹ ವಲಸಿಗರಿಗೆ ಉಪಯುಕ್ತವಾಗುವ ಕ್ರಮವನ್ನು ಜಾರಿಗೆ ತರಲು ಖತರ್ ಮುಂದಾಗಿದೆ. ಕ್ಯಾಬಿನೆಟ್ ಕರಡು ಕಾನೂನುಗಳನ್ನು ಅನುಮೋದಿಸಿದ್ದು, ಸುಲಭವಾಗಿ ಕೆಲಸ ಬದಲಾವಣೆ, ಕನಿಷ್ಠ ವೇತನ ಮತ್ತು ಕಾರ್ಮಿಕ ಕಾನೂನಿನ ಅಡಿಯಲ್ಲಿ ಒಳಪಡದವರೂ ಎಕ್ಸಿಟ್ ಪರ್ಮಿಟ್ ನಿಂದ ಮುಕ್ತ ಮುಂತಾದ ಕ್ರಮಗಳನ್ನು ಜಾರಿಗೊಳಿಸುವ ಕರಡು ಪ್ರತಿಗೆ ಅನುಮತಿ ನೀಡಿದೆ.

ಕಾರ್ಮಿಕ ಸಚಿವ ಯೂಸುಫ್ ಬಿನ್ ಮುಹಮ್ಮದ್ ಅಲ್-ಉಸ್ಮಾನ್ ಅಲ್-ಫಖ್ರು ಅವರು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) 100 ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯಲ್ಲಿ ಈ ವಿಷಯ ತಿಳಿಸಿದ್ದಾರೆ.

ಕಾರ್ಮಿಕ ಕಾನೂನಿನ ಅಡಿಯಲ್ಲಿ ಒಳಪಡದವರಿಗೆ ನಿರ್ಗಮನ ಪರವಾನಗಿ ಅಗತ್ಯವಿಲ್ಲ ಎನ್ನುವ ಕಾನೂನು ಗೃಹ ಕಾರ್ಮಿಕರಿಗೆ ಮತ್ತು ಇತರರಿಗೆ ಉಪಯುಕ್ತವಾಗಲಿದೆ. ಕ್ರಮಗಳು ಪೂರ್ಣಗೊಂಡ ನಂತರ ತಕ್ಷಣ ಕಾನೂನು ಜಾರಿಗೆ ತರಲಾಗುವುದು ಎಂದು ಸಚಿವರು ಹೇಳಿದರು. ಖತರ್ ಆಡಳಿತ ಅಭಿವೃದ್ಧಿ ಮತ್ತು ಸಮಾಜ ಕಲ್ಯಾಣ ಸಚಿವಾಲಯವು ಐಎಲ್‌ಒ ಸಹಯೋಗದೊಂದಿಗೆ ಕತಾರಾದಲ್ಲಿ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದೆ.

ಖತರ್ ವೇತನ ಸಂರಕ್ಷಣಾ ವ್ಯವಸ್ಥೆ, ಕಾರ್ಮಿಕರ ಪರಿಹಾರ ಸಮಿತಿ, ಕಾರ್ಮಿಕರ ಬೆಂಬಲ ಮತ್ತು ವಿಮಾ ನಿಧಿ, ಪ್ರಾಯೋಜಕತ್ವ ನಿರ್ಮೂಲನೆ ಮತ್ತು ವಿನಾಯಿತಿ ಪರವಾನಗಿಯಂತಹ ಹಲವಾರು ಕಾನೂನುಗಳನ್ನು ಜಾರಿಗೆ ತಂದಿದೆ. ಮಾನವ ಕಳ್ಳಸಾಗಣೆ ವಿರುದ್ಧ ರಾಷ್ಟ್ರೀಯ ಸಮಿತಿ ರಚನೆಯನ್ನೂ ಅವರು ಉಲ್ಲೇಖಿಸಿದರು. ಐಎಲ್‌ಒನ 100 ನೇ ವಾರ್ಷಿಕೋತ್ಸವದ ನೆನಪಿಗಾಗಿ ಖತರ್ ಮೂರು ನಾಣ್ಯಗಳನ್ನು ಬಿಡುಗಡೆ ಮಾಡಿದೆ.

ಕಾರ್ಮಿಕ ಮಾರುಕಟ್ಟೆಯಲ್ಲಿ ಖತರ್‌ನ ಸುಧಾರಣೆಗಳನ್ನು ಐಎಲ್‌ಒನ ಉಪ ಮಹಾನಿರ್ದೇಶಕ ಮೂಸ ಉಮರ್ ಅಭಿನಂದಿಸಿದ್ದಾರೆ. ಒಪ್ಪಂದದ ಅವಧಿಯಲ್ಲಿ ಕನಿಷ್ಠ ವೇತನ ಕಾಯ್ದೆ ಮತ್ತು ಉದ್ಯೋಗ ವರ್ಗಾವಣೆಯ ಕಾನೂನಿನ ವಿವರಗಳನ್ನು ಬಹಿರಂಗಪಡಿಸಲಾಗಿಲ್ಲ. ಹೊಸ ಕಾನೂನು ಭಾರತೀಯರು ಸೇರಿದಂತೆ ಲಕ್ಷಾಂತರ ವಲಸಿಗರಿಗೆ ಈ ಕ್ರಮ ಪ್ರಯೋಜನವನ್ನು ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.