ದುಬೈ: ಮೋಸದ ಗ್ಯಾಂಗ್‌ಗಳು ಖಾತೆಗಳಿಂದ ಹಣವನ್ನು ಕದಿಯಲು ಹೊಸ ವಿಧಾನದ ಮೂಲಕ ಯತ್ನಿಸುತ್ತಿರುವುದರ ಬಗ್ಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಅಬುಧಾಬಿ ಪೊಲೀಸರು ಇತ್ತೀಚೆಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಫೋನ್ ಅಥವಾ ಇಂಟರ್ನೆಟ್ ಮೂಲಕ ಯಾವುದೇ ಗೌಪ್ಯ ಮಾಹಿತಿಯನ್ನು ರವಾನಿಸಬಾರದು ಎಂದು ಹೇಳಿದ್ದಾರೆ. ಅಪರಿಚಿತ ಫೋನ್ ಸಂಖ್ಯೆಗಳಿಂದ ಬರುವ ಕರೆಗಳಿಗೆ ಸಂಪರ್ಕ ವಿವರಗಳನ್ನು ನೀಡಬಾರದು. ಗೌಪ್ಯ ಮಾಹಿತಿ ಅಥವಾ ಖಾತೆಯ ವಿವರಗಳ ಬಗ್ಗೆ ಫೋನ್‌ನಲ್ಲಿ ಯಾರಾದರೂ ವಿನಂತಿಸಿದರೆ ಆ ಬಗ್ಗೆ ಪೊಲೀಸರಿಗೆ ತಿಳಿಸಬೇಕು.
ಎಟಿಎಂ ಕಾರ್ಡ್ ರದ್ದುಗೊಳಿಸಲಾಗಿದೆ ಮತ್ತು ಖಾತೆಯನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳುವ ನಕಲಿ ಸಂದೇಶಗಳನ್ನು ಕಳುಹಿಸುವ ವಂಚನಾ ಜಾಲವು ಯುಎಇಯಲ್ಲಿ ವ್ಯಾಪಕವಾಗಿದೆ. ವಂಚಕರು ನಿಮ್ಮ ಖಾತೆಗಳಿಂದ ಹಣವನ್ನು ವರ್ಗಾಯಿಸಲು ಅಥವಾ ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಸಂಗ್ರಹಿಸಲು ಈ ರೀತಿ ಪ್ರಯತ್ನಿಸುತ್ತಾರೆ. ಈ ಕುರಿತು ಕೆಲವು ಸಂದೇಶಗಳು ಸಾಮಾಜಿಕ ಮಾಧ್ಯಮಗಳ ಮೂಲಕವೂ ಹರಡುತ್ತಿವೆ.
ಬ್ಲಾಕ್ ಆದ ಕಾರ್ಡ್ ಅಥವಾ ಖಾತೆಯನ್ನು ಮರುಬಳಕೆಗೆ ಬರುವಂತೆ ಮಾಡಲು ನಿರ್ದಿಷ್ಟ ಸಂಖ್ಯೆಗೆ ಕರೆ ಮಾಡುವ ಮೂಲಕ ಅಗತ್ಯ ಮಾಹಿತಿಯನ್ನು ಒದಗಿಸುವಂತೆ ಕರೆ ಮಾಡಲಾಗುತ್ತದೆ. ಇಂತಹ ಹಗರಣಗಳಲ್ಲಿ ಸಿಲುಕದಂತೆ ಪೊಲೀಸರ ಪ್ರಕಟನೆಯಲ್ಲಿ ತಿಳಿಸಲಾಗಿದೆ.