ನ್ಯೂಯಾರ್ಕ್: ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿಯ 74 ನೇ ಅಧಿವೇಶನದಲ್ಲಿ ಟರ್ಕಿಯ ಅಧ್ಯಕ್ಷ ಉರ್ದುಗಾನ್ ಕಾಶ್ಮೀರ ವಿಷಯವನ್ನು ಎತ್ತಿದ್ದಾರೆ. ಕಾಶ್ಮೀರವನ್ನು ಬದಿಗಿಟ್ಟು ದಕ್ಷಿಣ ಏಷ್ಯಾದಲ್ಲಿ ಸ್ಥಿರತೆ ಮತ್ತು ಪ್ರಗತಿಯನ್ನು ಸಾಧಿಸಲು ಸಾಧ್ಯವಿಲ್ಲ. ಭಾರತೀಯ ಕಾಶ್ಮೀರದಲ್ಲಿ 80 ಲಕ್ಷಕ್ಕೂ ಹೆಚ್ಚು ನಾಗರಿಕರು ಸಿಲುಕಿ ಕೊಂಡಿದ್ದಾರೆ ಎಂದು ಉರ್ದುಗಾನ್ ಆರೋಪಿಸಿದರು.
ಸುರಕ್ಷಿತ ಭವಿಷ್ಯಕ್ಕಾಗಿ ಸಂಘರ್ಷಕ್ಕಿಂತ ಸಂಭಾಷಣೆಯ ಮೂಲಕ ಪರಿಹಾರ ಕಾಣಬೇಕು. 72 ವರ್ಷದ ಕಾಶ್ಮೀರಿ ಸಮಸ್ಯೆಯನ್ನು ನ್ಯಾಯ ಮತ್ತು ಸಮಾನತೆಯ ಆಧಾರದ ಮೇಲೆ ಮಾತುಕತೆಗಳ ಮೂಲಕ ಪರಿಹರಿಸಬೇಕು. ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶಿಸಲು ಅಂತರ್ ರಾಷ್ಟ್ರೀಯ ಸಮುದಾಯ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ಭಾರತ ಮತ್ತು ಪಾಕಿಸ್ತಾನದ ಜೊತೆಗೂಡಿ ನಡೆಸುವ ಮಾತುಕತೆಯ ಮೂಲಕ ಕಾಶ್ಮೀರಿ ನಾಗರಿಕರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬೇಕು ಎಂದರು. ಇತ್ತೀಚೆಗೆ ಯುಎನ್ ಸಭೆಯಲ್ಲಿ ಪಾಕಿಸ್ತಾನದ ಪ್ರದಾನಿ ಇಮ್ರಾನ್ ಖಾನ್, ಉರ್ದುಗಾನ್ ಅವರನ್ನು ಭೇಟಿಯಾಗಿ, ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತ ಸರಕಾರದ ಕಾನೂನುಬಾಹಿರ ಮತ್ತು ಏಕಪಕ್ಷೀಯ ಕ್ರಮಗಳ ನಂತರ ಕಾಶ್ಮೀರದ ಇತ್ತೀಚಿನ ಪರಿಸ್ಥಿತಿಗಳ ಬಗ್ಗೆ ವಿವರಿಸಿದ್ದರು.