janadhvani

Kannada Online News Paper

ಅರಾಮ್ಕೊ ದಾಳಿಯ ಹಿಂದೆ ಇರಾನ್ ಕೈವಾಡ ಖಚಿತ- ಸೌದಿ ಅರೇಬಿಯಾ

ರಿಯಾದ್: ಅರಾಮ್ಕೊ ತೈಲ ಸಂಸ್ಕರಣಾಗಾರದ ಮೇಲಿನ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಸೌದಿ ಅರೇಬಿಯಾ ಖಚಿತಪಡಿಸಿದೆ. ಇದನ್ನು ಸಾಬೀತುಪಡಿಸುವ ಸಾಕ್ಷ್ಯಗಳನ್ನು ಸೌದಿ ಅರೇಬಿಯಾ ಬಿಡುಗಡೆ ಮಾಡಿದೆ.

ಅರಾಮ್ಕೊ ದಾಳಿಗೆ ಬಳಸಲಾದ ಕ್ಷಿಪಣಿಗಳ ಅವಶೇಷಗಳನ್ನು ಸೌದಿ ಪ್ರದರ್ಶಿಸಿದೆ. ರಕ್ಷಣಾ ಇಲಾಖೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸಾಕ್ಷ್ಯವನ್ನು ಬಿಡುಗಡೆ ಮಾಡಿದೆ. ದಾಳಿಯಲ್ಲಿ ಬಳಸಿದ ಡ್ರೋನ್‌ ಮತ್ತು ಕ್ಷಿಪಣಿಗಳ ಆಧಾರದಿಂದ ದಾಳಿಯ ಹಿಂದೆ ಇರಾನ್ ಇದೆ ಎಂಬುದು ಸಂಶಯಾತೀತವಾಗಿ ದೃಢಪಟ್ಟಿದೆ ಎಂದು ಸೌದಿ ರಕ್ಷಣಾ ಸಚಿವಾಲಯ ಹೇಳಿದೆ.

ದಾಳಿಯಲ್ಲಿ 18 ಡ್ರೋನ್‌ಗಳು ಮತ್ತು ಏಳು ಕ್ರೂಸ್ ಕ್ಷಿಪಣಿಗಳನ್ನು ಬಳಸಲಾಯಿತು. ಇವು ಯೆಮೆನ್‌ನಿಂದ ಅರಾಮ್ಕೊ ವಿರುದ್ಧ ಬಳಸಲ್ಪಟ್ಟವು. ಯೆಮನ್‌ನಲ್ಲಿ ಇರಾನಿನ ಬೆಂಬಲಿತ ಹೂತಿ ಬಂಡುಕೋರರು ಈ ದಾಳಿಯನ್ನು ತಾನು ನಡೆಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಅರಾಮ್ಕೊ ದಾಳಿಯ ಹಿಂದೆ ಇರಾನ್ ಕೈವಾಡವಿದೆ ಎಂದು ಅಮೆರಿಕ ಈ ಹಿಂದೆ ಆರೋಪಿಸಿತ್ತು. ಇರಾನ್ ಆರೋಪಗಳನ್ನು ನಿರಾಕರಿಸಿದೆ ಮತ್ತು ಯಾವುದೇ ಮಿಲಿಟರಿ ಕ್ರಮ ಉಂಟಾದರೆ ಪ್ರತಿದಾಳಿ ನಡೆಸಲಾಗುವುದು ಎಂದು ಎಚ್ಚರಿಸಿದೆ.

ಸೌದಿ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ತುರ್ಕಿ ಅಲ್-ಮಾಲಿಕಿ ಮಾತನಾಡಿ, ಸೌದಿಗೆ ಎಲ್ಲಿಂದ ದಾಳಿ ನಡೆಸಲಾಗಿದೆ ಎಂಬುದನ್ನು ದೃಢಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು. ಡ್ರೋನ್‌ಗಳಲ್ಲಿನ ಕಂಪ್ಯೂಟರ್‌ಗಳಿಂದ ಸಂಗ್ರಹಿಸಿದ ಮಾಹಿತಿಯಿಂದ ಅದು ಇರಾನ್‌ಗೆ ಸೇರಿದ್ದು ಎಂವುದು ಸ್ಪಷ್ಟವಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.