ನವದೆಹಲಿ: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕಿದ ನಂತರ ಗೃಹ ಬಂಧನದಲ್ಲಿರುವ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂಬಂಧ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಜಮ್ಮು-ಕಾಶ್ಮೀರ ಆಡಳಿತ ಬಳಿ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಎಸ್ ಎ ಬೊಬ್ಡೆ ಮತ್ತು ಎಸ್ ಎ ನಾಜೀರ್ ಅವರನ್ನೊಳಗೊಂಡ ನ್ಯಾಯಪೀಠ ಕೇಂದ್ರ ಹಾಗೂ ರಾಜ್ಯಕ್ಕೆ ನೊಟೀಸ್ ಜಾರಿ ಮಾಡಿ ರಾಜ್ಯಸಭಾ ಸದಸ್ಯ ಎಂಡಿಎಂಕೆ ನಾಯಕ ವೈಕೊ ಅವರ ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಕಾಯ್ದಿರಿಸಿದೆ.
ಯಾವುದೇ ಅಧಿಕೃತ ಕಾನೂನು ಇಲ್ಲದೆ ಫಾರೂಕ್ ಅಬ್ದುಲ್ಲಾ ಅವರನ್ನು ಅನಧಿಕೃತವಾಗಿ ಗೃಹಬಂಧನದಲ್ಲಿಡುವ ಮೂಲಕ ಅವರ ಸಾಂವಿಧಾನಿಕ ಹಕ್ಕುಗಳನ್ನು ಕಸಿಯಲಾಗಿದೆ ಎಂದು ತಮಿಳುನಾಡಿನ ರಾಜ್ಯ ಸಭಾ ಸದಸ್ಯ ಎಂಡಿಎಂಕೆ ನಾಯಕ ವೈಕೊ ಸುಪ್ರೀಂ ಕೋರ್ಟ್ ನಲ್ಲಿ ಆಕ್ಷೇಪ ಅರ್ಜಿ ಸಲ್ಲಿಸಿದ್ದರು. ಅವರು ಚೆನ್ನೈಯಲ್ಲಿ ನಿನ್ನೆ ಆಯೋಜಿಸಿದ್ದ ಸಮ್ಮೇಳನದಲ್ಲಿ ಭಾಗವಹಿಸಲು ಫಾರೂಕ್ ಅಬ್ಜುಲ್ಲಾ ಅವರಿಗೆ ಅವಕಾಶ ನೀಡಬೇಕೆಂದು ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.