ರಿಯಾದ್: ಕಾರ್ಮಿಕರ ರಜಾ ವೇತನವನ್ನು ವಾರ್ಷಿಕ ರಜೆಯ ಮುಂಚಿತವಾಗಿ ಸಂದಾಯ ಮಾಡುವಂತೆ ಸೌದಿ ಮಾನವ ಹಕ್ಕುಗಳ ಆಯೋಗ ಆದೇಶಿಸಿದೆ. ಕಾರ್ಮಿಕರಿಗೆ ವರ್ಷಕ್ಕೆ 21 ದಿನಗಳಿಗಿಂತ ಕಡಿಮೆಯಲ್ಲದ ರಜೆ ಪಡೆಯಲು ಅರ್ಹತೆ ಇದೆ ಎಂದು ಮಾನವ ಹಕ್ಕುಗಳ ಆಯೋಗ ತಿಳಿಸಿದೆ.
ಅಲ್ಲದೆ, ಸತತ ಐದು ವರ್ಷಗಳ ಸೇವೆಯನ್ನು ಪೂರೈಸಿದ ಕಾರ್ಮಿಕನಿಗೆ ವರ್ಷಕ್ಕೆ 30 ದಿನಗಳಿಗಿಂತ ಕಡಿಮೆಯಲ್ಲದ ವಾರ್ಷಿಕ ರಜೆ ಪಡೆಯಲು ಅರ್ಹತೆ ಇದೆ ಎಂದು ಆದೇಶದಲ್ಲಿ ತಿಳಿಸಲಾಗಿದ್ದು, ಕಾರ್ಮಿಕನಿಗೆ ಸಂಬಳದೊಂದಿ ವಾರ್ಷಿಕ ರಜೆ ನೀಡಬೇಕು ಎಂದಿದೆ.
ವಾರ್ಷಿಕ ರಜೆಗೆ ಮುಂಚಿತವಾಗಿ ರಜಾ ವೇತನವನ್ನು ತಲುಪಿಸಬೇಕು. ಕೆಲಸಗಾರನು ಕೆಲಸ ತ್ಯಜಿಸುವುದಾದರೆ ಸೇವೆಯ ಅವಧಿಗೆ ಅನುಗುಣವಾಗಿ ಅರ್ಹ ವಾರ್ಷಿಕ ರಜಾ ದಿನಗಳ ಸಂಭಾವನೆಯನ್ನು ಪಡೆಯಲು ಅರ್ಹನಾಗಿರುತ್ತಾನೆ.
ಹೆಂಡತಿ, ಗಂಡ, ಪೋಷಕರು ಅಥವಾ ಮಕ್ಕಳ ಸಾವಿನ ಸಂದರ್ಭದಲ್ಲಿ, ಕೆಲಸಗಾರನಿಗೆ ಐದು ದಿನಗಳ ರಜೆ ಪೂರ್ಣ ವೇತನದಲ್ಲಿ ಲಭಿಸುವ ಅವಕಾಶವಿದೆ. ಮದುವೆಗೂ ಇದೇ ರೀತಿಯ ರಜೆಯನ್ನು ನೀಡಲಾಗುವುದು.
ಹಜ್ ನಿರ್ವಹಿಸದ ಕಾರ್ಮಿಕನಿಗೆ ಸೇವಾ ಅವಧಿಯಲ್ಲಿ ಒಮ್ಮೆ ಹಜ್ ನಿರ್ವಹಿಸಲು ಅರ್ಹತೆ ಇದೆ, ಬಕ್ರೀದ್ ರಜೆ ಸಹಿತ ಹತ್ತು ದಿನಗಳಿಗಿಂತ ಕಡಿಮೆಯಾಗದೆ, ಹದಿನೈದು ದಿನಗಳಿಗಿಂತ ಮೀರದ ಸಂಬಳ ಸಹಿತ ರಜೆ ಪಡೆಯುವ ಅರ್ಹತೆ ಇದೆ.
ನೌಕರನು ವೇತನ ರಹಿತ ರಜೆಯನ್ನು ಉದ್ಯೋಗದಾತರ ಒಪ್ಪಿಗೆಯೊಂದಿಗೆ ಬಳಸಬಹುದು ಎಂದು ಮಾನವ ಹಕ್ಕುಗಳ ಆಯೋಗ ವ್ಯಕ್ತಪಡಿಸಿದೆ.