ನವದೆಹಲಿ (ಆ.24): ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದ್ದ ವಿರೋಧ ಪಕ್ಷಗಳ ನಿಯೋಗವನ್ನು ವಾಪಸ್ಸು ಕಳುಹಿಸಿರುವ ಸರ್ಕಾರದ ವರ್ತನೆಗೆ ರಾಹುಲ್ ಗಾಂಧಿ ಟೀಕಿಸಿದ್ದಾರೆ. ಅಲ್ಲದೇ, ಜಮ್ಮು ಕಾಶ್ಮೀರದಲ್ಲಿ ಸಹಜ ವಾತಾವರಣವಿದೆ ಎಂದ ಮೇಲೆ ನಮ್ಮನ್ನು ವಾಪಸ್ಸು ಕಳುಹಿಸಿದ್ದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ತಿಳಿಯುತ್ತಿದೆ. ಮೋದಿ ಸರ್ಕಾರ ವಿಪಕ್ಷ ನಿಯೋಗಕ್ಕೆ ಅವಕಾಶ ಕಲ್ಪಿಸದೇ ಏನನ್ನೊ ಮುಚ್ಚಿಡುತ್ತಿದೆ ಎಂದು ಆರೋಪಿಸಿದ್ದಾರೆ.
ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಸಿಂಗ್ ಆಹ್ವಾನದ ಮೇರೆಗೆ ಕಣಿವೆ ರಾಜ್ಯದ ಸ್ಥಿತಿಗತಿ ಅರಿಯಲು ರಾಹುಲ್ ಗಾಂಧಿ ಸೇರಿದಂತೆ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಸಿಪಿಎಂನ ಸೀತಾರಾಂ ಯೆಚೂರಿ, ಸಿಪಿಐನ ಡಿ.ರಾಜಾ, ಆರ್ಜೆಡಿಯ ಮನೋಜ್ ಝಾ, ಎನ್ಸಿಪಿಯ ದಿನೇಶ್ ತ್ರಿವೇದಿ, ಡಿಎಂಕೆಯ ತಿರುಚ್ಚಿ ಶಿವ ವಿಪಕ್ಷ ನಾಯಕರು ಇಂದು ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದರು. ಕಾಶ್ಮೀರದ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ರಾಜಕೀಯ ನಾಯಕರು ಇಲ್ಲಿಗೆ ಭೇಟಿಯಿಂದಾಗಿ ಇಲ್ಲಿನ ಶಾಂತಿಗೆ ತೊಂದರೆಯಾಗುತ್ತದೆ ಎಂದು ಅವರನ್ನು ಮರಳಿ ಕಳುಹಿಸಲಾಗಿದೆ.
ಸರ್ಕಾರದ ಈ ಕ್ರಮದ ವಿರುದ್ಧ ಟ್ವಿಟರ್ನಲ್ಲಿ ಟೀಕಿಸಿರುವ ರಾಹುಲ್ ಗಾಂಧಿ, ಜಮ್ಮು ಮತ್ತು ಕಾಶ್ಮೀರದಲ್ಲಿ ಸಹಜ ಪರಿಸ್ಥಿತಿ ಇದ್ದರೆ ಯಾಕೆ ವಿಪಕ್ಷ ನಾಯಕರನ್ನು ವಾಪಸ್ಸು ಕಳುಹಿಸಲಾಗಿದೆ ಎಂದು ಕೇಳಿದ್ದಾರೆ.