ಉಡುಪಿ: ಎನ್ ಐ ಎ ಯಾವುದೇ ತನಿಖೆ ನಡೆಸದೇ ಮಾಧ್ಯಮಗಳು ರವೂಫ್ ರವರನ್ನು ಭಯೋತ್ಪಾದಕ ಅಂತ ಚಿತ್ರೀಕರಿಸಲು ಮಾಧ್ಯಮಗಳಿಗೆ ಮಾಹಿತಿ ನೀಡಿದವರು ಯಾರು ಎಂದು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಸಮಿತಿ ಹಮ್ಮಿಕೊಂಡ ಸಭೆಯಲ್ಲಿ ಪ್ರಶ್ನಿಸಿದರು.
ಮಾಧ್ಯಮಗಳು ಸಮಾಜದ ಬೆಳಕಾಗಿರಬೇಕೇ ಹೊರತು ಧರ್ಮಕ್ಕೆ ದ್ರೋಹ ಬಗೆಯುವವರಾಗಬಾರದು. ಈಗೀಗ ಮಾಧ್ಯಮಗಳ ಸೃಷ್ಟಿಯಿಂದಲೇ ಇಂತಹ ಅನಾಹುತಗಳಿಗೆ ಕಾರಣ ಎಂದು ಕಲ್ಲಟ್ಟ ರಝ್ವಿ ಹೇಳಿದರು.
ಇಸ್ಲಾಂ ಪ್ರೀತಿಯನ್ನು ಕಲಿಸಿಕೊಡುತ್ತದೆ. ಭಯೋತ್ಪಾದನೆಗೆ ಯಾವತ್ತೂ ಕೂಡ ಅನುಮತಿಸಿಲ್ಲ. ಅನುಮತಿಸುವುದೂ ಇಲ್ಲ. ದೇಶದಲ್ಲಿ ನಿರಂತರವಾಗಿ ಭಯೋತ್ಪಾದನೆಯ ಹೆಸರಿನಲ್ಲಿ ಬಂಧಿಸಲ್ಪಟ್ಟ ಯುವಕರೂ ಇದೇ ರೀತಿಯ ಷಡ್ಯಂತ್ರಗಳಿಗೆ ಬಲಿಪಶು ಆಗಿರಬಹುದೆನ್ನುವ ಸಂಶಯ ಕಾಡುತ್ತಿದೆ ಎಂದು ಅವರು ಹೇಳಿದರು.
ರವೂಫ್ ರವರ ಕುರಿತು ಆಧಾರ ರಹಿತ ಆರೋಪವನ್ನು ಬಿತ್ತರಿಸಿದ ಮಾಧ್ಯಮಗಳು ಕರ್ನಾಟಕ ಜನತೆಯೊಂದಿಗೆ ಕ್ಷಮೆಯಾಚಿಸಬೇಕಾಗಿದೆ ಎಂದು ಕಲ್ಕಟ್ಟ ರಝ್ವಿ ಇದೇ ಸಂದರ್ಭದಲ್ಲಿ ಆಗ್ರಹಿಸಿದರು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಎಂ.ಎಚ್. ಅಹ್ಮದ್ ಶಬೀರ್ ಸಖಾಫಿ ಅವರ ಅಧ್ಯಕ್ಷತೆಯಲ್ಲಿ ಉಡುಪಿ ಸಿಟಿ ಬಸ್ ಸ್ಟಾಂಡ್ ಬಳಿ ನಡೆದ ಸಭೆಯಲ್ಲಿ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಕೋಶಾಧಿಕಾರಿ ಹಾಜಿ ಅಬ್ದುಲ್ ವಹೀದ್ ಉಡುಪಿ, ಎಸ್ಸೆಸ್ಸೆಫ್ ಜಿಲ್ಲಾ ಉಪಾಧ್ಯಕ್ಷ ಮುಹಿಯ್ಯದ್ದೀನ್ ಸಖಾಫಿ ಪಯ್ಯಾರು, ಅಬ್ದುಲ್ ಖಯ್ಯೂಂ ಹೂಡೆ, ಫಾರೂಖ್ ಟಾಪ್ ಸೆಲಕ್ಷನ್, ಜಿಲ್ಲಾ ಸದಸ್ಯರಾದ ಮುಹಮ್ಮದ್ ಸಮೀರ್ ಕೋಡಿ, ನಿಝಾಮ್ ಕುಂದಾಪುರ, ಅಬ್ದುಲ್ ಅಝೀಝ್ ಕಾಪು , ಸಮೀಮ್ ಉಡುಪಿ, ಆಸಿಫ್ ಬೆಳಪು, ನಾಸಿರ್ ಉಚ್ಚಿಲ ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಎಂ.ಕೆ. ಇಬ್ರಾಹಿಮ್ ಮಜೂರು ಸ್ವಾಗತಿಸಿ, ತ್ವಾಯಿರ್ ಮೂಡುಗೋಪಾಡಿ ವಂದಿಸಿದರು.
ವರದಿ:- PMS ಪಡುಬಿದ್ರಿ.