ದೋಹಾ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಕತ್ತರ್ ರಾಷ್ಟ್ರೀಯ ಸಮಿತಿಯ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭದ ಪ್ರಯುಕ್ತ ’ಫ್ರೀಡಂ -73’ ಕಾರ್ಯಕ್ರಮ ಇತ್ತೀಚಿಗೆ ದೋಹಾದಲ್ಲಿ ನಡೆಯಿತು.
ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಯೂಸುಫ್ ಸಖಾಫಿ ಅಯ್ಯಂಗೇರಿ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಕೆ.ಸಿ.ಎಫ್. ಅಂತರಾಷ್ಟ್ರೀಯ ಸಮಿತಿ ಸದಸ್ಯರಾದ ಹಾಫಿಲ್ ಉಮರುಲ್ ಫಾರೂಖ್ ಸಖಾಫಿ ಉದ್ಘಾಟಿಸಿದರು. ರಹ್ಮತುಲ್ಲಾ ಸಖಾಫಿ ಎಳಮರಂ ವಿಷಯ ಮಂಡಿಸಿದರು.
ಎರಡು ಶತಮಾನಗಳಷ್ಟು ಕಾಲ ಬ್ರಿಟಿಷರ ಕಪಿಮುಷ್ಟಿಯಲ್ಲಿ ನಲುಗುತ್ತಿರುವ ಭಾರತಕ್ಕೆ ಸ್ವಾತಂತ್ರ್ಯ ಲಭಿಸಿರುವುದು, ನಮ್ಮ ಹಿರಿಯರು ಮಾಡಿದ ತ್ಯಾಗ, ಮತ್ತು ಜಾತಿ-ಮತ ಭೇದವಿಲ್ಲದೆ ಒಟ್ಟಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಕಂಕಣಬದ್ಧರಾಗಿ ನಿಂತು ಹೋರಾಡಿರುವುದರ ಫಲವಾಗಿದೆ. ಆದರೆ ಇಂದಿನ ಭಾರತದ ರಾಜಕೀಯ ವಿದ್ಯಮಾನಗಳು ಜನತೆಯನ್ನು ಸ್ವಾತಂತ್ರ್ಯದಿಂದ ಪಾರತಂತ್ರ್ಯರನ್ನಾಗಿಸುತ್ತಿದೆ.
ಕೆಲವು ಸ್ವಾರ್ಥ ರಾಜಕಾರಣಿಗಳು ಮತ್ತು ಅಧಿಕಾರಿಗಳು ಈ ನಿಟ್ಟಿನಲ್ಲಿ ಸಮಾಜವನ್ನು ಒಡೆಯುವಂತಹ ಕೆಲಸಗಳಲ್ಲಿ ತೊಡಗಿ ಅದರಿಂದ ತಮ್ಮ ಬೇಳೆ ಬೇಯಿಸುತ್ತಿರುವಾಗ ಅದರ ವಿರುದ್ಧ ಧೈರ್ಯವಾಗಿ ಪ್ರತಿಭಟಿಸಲು ಸಾಮಾಜಿಕ, ಧಾರ್ಮಿಕ ನ್ಯಾಯವನ್ನು ದೊರಕಿಸುವಲ್ಲಿ ಪ್ರಜ್ಞಾವಂತ ಸಮಾಜವು ಮುಂದೆ ಬರಬೇಕಾಗಿದೆ ಎಂದು ಫ್ರೀಡಂ – 73 ಕಾರ್ಯಕ್ರಮದಲ್ಲಿ ಮುಖ್ಯಭಾಷಣ ಮಾಡುತ್ತಾ ರಹ್ಮತುಲ್ಲಾಹ್ ಸಖಾಫಿ ಯವರು ಹೇಳಿದರು.
ಕರ್ನಾಟಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಲಪ್ರವಾಹದಿಂದ ನಿರಾಶ್ರಿತರಾದ ಸಂತ್ರಸ್ತರಿಗಾಗಿ ಕತ್ತರ್ ಕೆಸಿಎಫ್ ವಿವಿಧ ಝೋನ್ ಗಳಲ್ಲಿ ಸಂಗ್ರಹಿಸಿದ ನೆರೆ ಪರಿಹಾರ ನಿಧಿಯನ್ನು ಇದೇ ವೇದಿಕೆಯಲ್ಲಿ ಝೋನ್ ಪ್ರತಿನಿಧಿಗಳು ರಾಷ್ಟ್ರೀಯ ನೇತಾರರಿಗೆ ಹಸ್ತಾಂತರಿಸಿದರು. ಕೆಸಿಎಫ್ ದೋಹಾ ಝೋನ್ ಸಾಂತ್ವನ ವಿಭಾಗದ ಕಾರ್ಯದರ್ಶಿ ಝುಬೈರ್ ತುರ್ಕಳಿಕೆ, ಕೆಸಿಎಫ್ ಅಝೀಝಿಯ ಝೋನ್ ಅಧ್ಯಕ್ಷರಾದ ನಸ್ರತುಲ್ಲಾ ಸಾಹೆಬ್ ಮಲ್ಪೆ ಮತ್ತು ಮದೀನಾ ಖಲೀಫಾ ಝೋನ್ ಸಾಂತ್ವನ ವಿಭಾಗದ ಅಧ್ಯಕ್ಷರಾದ ಇಬ್ರಾಹಿಮ್ ಖಲೀಲ್ ಕೆ.ಸಿ ರೋಡು ರವರು ತಮ್ಮ ಝೋನ್ ಗಳಲ್ಲಿ ಸಂಗ್ರಹಿಸಿದ ದೇಣಿಗೆಗಳನ್ನು ಕೆಸಿಎಫ್ ರಾಷ್ಟೀಯ ಸಮಿತಿ ಸಾಂತ್ವನ ವಿಭಾಗ ಕಾರ್ಯದರ್ಶಿ ಹಸನ್ ಪುಂಜಾಲಕಟ್ಟೆ ರವರಿಗೆ ಹಸ್ತಾಂತರಿಸಿದರು.
ವೇದಿಕೆಯಲ್ಲಿ ಕೆಸಿಎಫ್ ರಾಷ್ಟ್ರೀಯ ಸಮಿತಿ ನಾಯಕರಾದ ಮುಹಮ್ಮದ್ ಕಬೀರ್ ಪನೀರ್, ಅಬ್ದುಲ್ ಸತ್ತಾರ್ ಅಶ್ರಫಿ ಮಠ, ಮುನೀರ್ ಮಾಗುಂಡಿ, ಅರಬಿ ಕುಂಞಿ ಮುಡಿಪು, ಸಾದಿಕ್ ಮೂಳೂರು ಮುಂತಾದವರು ಉಪಸ್ಥಿತರಿದ್ದರು. ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗ ಅಧ್ಯಕ್ಷರಾದ ಮುಹಮ್ಮದ್ ಹನೀಫ್ ಪಾತೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಖ್ ಹಂಡುಗುಳಿ ವಂದಿಸಿದರು.