janadhvani

Kannada Online News Paper

ಅಣ್ಣಾ.. ನಮ್ಗೆ ಶಾಲೆಗೆ ಹೋಗಲು ಬುಕ್ಕು ತಂದು ಕೊಡ್ತೀರಾ ಎಂದು ಕೇಳ್ತಿದ್ದಾರೆ ಇಲ್ಲಿನ ಮಕ್ಕಳು

ಹಾಫಿಝ್ ಸುಫ್ಯಾನ್ ಸಖಾಫಿ
(ಉಪಾಧ್ಯಕ್ಷ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
16/8/2019. 9.35pm ಬೆಳಗಾವಿ

——————————————————

ರಾಜ್ಯದ ಹಲವು ಜಿಲ್ಲೆಗಳ ಎಸ್ಸೆಸ್ಸೆಫ್ ಕಾರ್ಯಕರ್ತರು ಸಂಗ್ರಹಿಸಿ ಕಳುಹಿಸಿದ ಅಗತ್ಯವಸ್ತುಗಳನ್ನು ಬೃಹತ್ ಗೋಡೌನ್ ಒಂದರಲ್ಲಿ ರಾಶಿ ಹಾಕಿ ರಾತ್ರಿ ಹಗಲೆಂದಿಲ್ಲದೆ ರಾಜ್ಯ ನಾಯಕರ ಸಹಿತವಿರುವ ಕಾರ್ಯಕರ್ತರು ಬೃಹತ್ ಕಿಟ್ ಗಳನ್ನು ರೆಡಿ ಮಾಡುತ್ತಿದ್ದಾರೆ.

ಅಗತ್ಯ ಪಾತ್ರೆಗಳು, ವಸ್ತೃಗಳು, ಆಹಾರ ಸಾಮಗ್ರಿಗಳು, ಪೇಸ್ಟ್ ಸೋಪಿನಿಂದ ಹಿಡಿದು ಪ್ಲಾಸ್ಟಿಕ್ ಬಕೆಟಿನ ವರೆಗೆ ಎಲ್ಲವೂ ತುಂಬಿರುವ ಎಸ್ಸೆಸ್ಸೆಫ್ಫಿನ ಕಿಟ್ ಗಾಗಿ ಜನ ಮುಗಿಬೀಳುತ್ತಿದ್ದಾರೆ. ಹಲವು ಜಿಲ್ಲೆಗಳ ನಮ್ಮ ಕಾರ್ಯಕರ್ತರು, ನಾಯಕರು ಸಂಗ್ರಹಿಸಿ ಕಳುಹಿಸಿದ ಅಗತ್ಯವಸ್ತುಗಳು ಬೆಳಗಾವಿ ಜಿಲ್ಲೆಗೆ ಮಾತ್ರ ಐದು ಟ್ರಕ್ ಗಳಲ್ಲಿ ಹಾಗೂ 4 ಪಿಕಪ್ ಗಳಲ್ಲಿ ತಲುಪಿದೆ. ಬೃಹದಾಕಾರದ ಗೋಡೌನ್ ತುಂಬಿತುಳುಕಿ ಕೊನೆಗೆ ಬಂದ ಟ್ರಕ್ ಗಳ ಸಾಮಾನು ಇಳಿಸಲು ಹಲವು ಕಿಟ್ ಗಳನ್ನು ಕೊಟ್ಟು ಖಾಲಿ ಮಾಡಬೇಕಾಯಿತು.

ಹತ್ತರಷ್ಟು ನಿರಾಶ್ರಿತರ ಕೇಂದ್ರಗಳು ಜರ್ಝರಿತ ಗೊಂಡಿರುವ ಹಲವು ಹಳ್ಳಿಗಳು, ಗಲ್ಲಿಗಳು ನಮ್ಮ ಲೀಸ್ಟ್ ನಲ್ಲಿದೆ. ಪ್ರತೀಯೊಬ್ಬರ ಮನೆ, ಕುಟುಂಬ ಸದಸ್ಯರ ಸಂಪೂರ್ಣ ಮಾಹಿತಿ ಪಡೆದು ಅರ್ಹರಿಗೆ ಅರ್ಹವಾಗಿಯೇ ತಲುಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದೇವೆ.ಇಂದು ರಾತ್ರಿ ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ದಾವಣಗೆರೆ ಜಿಲ್ಲೆಯ ಜಗಳೂರಿನಿಂದ ಎಸ್ಸೆಸ್ಸೆಫ್ ಕಾರ್ಯಕರ್ತರು ಕಿಟ್ ಗಳನ್ನು ರೆಡಿಮಾಡಿ ಹಂಚಲು ಹಾಗೂ ಕೆಸರಿನಲ್ಲಿ ತುಂಬಿ ತುಳುಕಿರುವ ಸರಕಾರಿ ಶಾಲೆಗಳನ್ನು ಶುಚಿಗೊಳಿಸಲು ನಮ್ಮೊಂದಿಗೆ ಕೈ ಜೋಡಿಸಲು ಇಲ್ಲಿಗೆ ತಲುಪಲಿದ್ದಾರೆ.

ರಾಜ್ಯಾಧ್ಯಕ್ಷ ಸಯ್ಯಿದ್ ಉಮರ್ ಅಸ್ಸಖಾಫ್ ರವರು ಬಿಡುವಿಲ್ಲದ ಒತ್ತಡಗಳ ಮಧ್ಯೆಯೂ ಎರಡು ದಿನ ಸಂಪೂರ್ಣವಾಗಿ ಇಲ್ಲಿ ತಂಗಿ ನಮಗೆ ಆವೇಶ ತುಂಬಿದ್ದಾರೆ. ಒಟ್ಟಿನಲ್ಲಿ ರಾಜ್ಯಾದ್ಯಂತವಿರುವ ಕಾರ್ಯಕರ್ತರ ಮನತುಂಬಿದ ಸಹಕಾರ ಹಲವು ಕುಟುಂಬಗಳ ಕಣ್ಣೀರೊಪ್ಪಲು ಕಾರಣವಾಗಿದೆ.

ಇಲ್ಲಿ ಮಳೆ ನಿಂತು ಬಿಸಿಲಾವರಿಸಿದೆ. ಆದರೆ ನಿರಾಶ್ರಿತ ಕೇಂದ್ರಗಳು ತುಂಬಿ ತುಳುಕಿದೆ. ಕಾರಣ ಪತ್ರಕರ್ತರ ಅಧಿಕೃತ ಲೆಕ್ಕಾಚಾರ ಪ್ರಕಾರ ಆರು ಸಾವಿರಕ್ಕೂ ಮಿಕ್ಕ ಮನೆಗಳು ಈ ಗೋಕಾಕ್ ಪಟ್ಟಣದಲ್ಲಿ ಮಾತ್ರ ಸಂಪೂರ್ಣ ಧರೆಗುರುಳಿದೆ. ಇವರಿಗೆಲ್ಲ ಪುನರ್ವಸತಿಯ ವ್ಯವಸ್ಥೆಯಾಗದೆ ಶಾಲಾ ಕಾಲೇಜುಗಳು ತೆರೆಯುವಂತಿಲ್ಲ ಕಾರಣ ಪ್ರಮುಖ ಶಾಲಾ ಕಾಲೇಜುಗಳಲ್ಲಿ ತುಂಬಾ ನಿರಾಶ್ರಿತರೇ..! ಅದೂ ಒಂದೊಂದು ಕ್ಲಾಸ್ ರೂಮಿನಲ್ಲಿ ಹತ್ತಕ್ಕೂ ಹೆಚ್ಚು ಕುಟುಂಬಗಳು!! ಕ್ಲಾಸ್ ರೂಂ ತುಂಬಿ ಹಲವು ಕುಟುಂಬಗಳು ಶಾಲೆಯ ವರಾಂಡಗಳಲ್ಲಿವೆ. ಎದ್ದೇಳಲಾರದ ವೃದ್ಧರು, ಗರ್ಭಿಣಿ ಸ್ತ್ರೀಯರು, ತಿಂಗಳುಗಳು ಮಾತ್ರ ತುಂಬಿರುವ ಕಂದಮ್ಮಗಳನ್ನು ಹೊತ್ತಿರುವ ಮಹಿಳೆಯರು ಅದೂ ಉಟ್ಟಬಟ್ಟೆಯಲ್ಲೇ ತಮ್ಮೆಲ್ಲವನ್ನು ಕಳೆದುಕೊಂಡು ನಿಂತಿದ್ದಾರೆ. ಎಂಥಹಾ ಕಲ್ಲು ಹೃದಯವೂ ಕರಗಿಹೋಗುವ ಭೀಕರ ದೃಶ್ಯವಿದು..

ನಿನ್ನೆ ತಾಲೂಕು ಪಂಚಾಯತ್ ಅಧ್ಯಕ್ಷರು, ತಹಶಿಲ್ದಾರ್ ಗಳೊಂದಿಗೆ ಮಾತನಾಡಿದಾಗ ದೊಡ್ಡ ಗ್ರೌಂಡಿನಲ್ಲಿ ತಾತ್ಕಾಲಿಕ ಟೆಂಟ್ ಗಳನ್ನು ಹಾಕಿ ನಿರಾಶ್ರಿತರನ್ನು ಸದ್ಯಕ್ಕೆ ಅಲ್ಲಿಗೆ ಶಿಫ್ಟ್ ಮಾಡಲಿದ್ದೇವೆ. ಸರಕಾರ ಮನೆ ನಿರ್ಮಾಣಕ್ಕಾಗಿ ಸಹಕರಿಸಬಹುದು ಎಂದು ಹೇಳಿದರು. ಅದಿನ್ನೆಷ್ಟು ದಿನಗಳು ಕಾಯಬೇಕೋ ಅಲ್ಲಾಹನೇ ಬಲ್ಲ..

ಇನ್ನು ಕೆಲವು ಕಿಟ್ ವಿತರಣೆಗಾಗಿ ಹೋದಾಗ ಕೆಲವು ಮಕ್ಕಳು ಬಂದು “ಅಣ್ಣಾ.. ನಮ್ಮ ಬ್ಯಾಗು, ಬುಕ್ಕುಗಳೆಲ್ಲವೂ ನೀರಲ್ಲಿ ಕೊಚ್ಚಿ ಹೋಗಿವೆ. ಬುಕ್ಕು ತಂದು ಕೊಡ್ತೀರ ಅಣ್ಣಾ..” ಎಂದು ಕೇಳಿದ್ರು. ನಿನ್ನೆ ತಹಶಿಲ್ದಾರ್ ಕೂಡ ಬುಕ್ ತಂದು ಕೊಟ್ರೆ ತುಂಬಾ ಉಪಕಾರ ಆಗ್ತಿತ್ತು ಎಂದು ಹೇಳಿದ್ದಾರೆ.ನಾವು ನಮ್ಮ ಕಾರ್ಯಕರ್ತರಿಗೆ ಹೇಳ್ತೇವೆ ಎಂದು ಹೇಳಿದ್ದೇವೆ‌ ಅಷ್ಟೇ. ರಾಜ್ಯಾದ್ಯಂತ ಒಂದು ಲಕ್ಷ ಪುಸ್ತಕ ಸಂಗ್ರಹಕ್ಕಾಗಿ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಕರೆ ನೀಡುತ್ತಿದೆ. ಪುಟ್ಟ ಮಕ್ಕಳಿಗಾಗಿ ಬುಕ್ಕು ಪೆನ್ನು ಕೇಳಿದರೆ ಯಾರೂ ಕೊಡದಿರ್ಲಿಕ್ಕಿಲ್ಲ. ಕಾರ್ಯಕರ್ತರು ಸಹಕರಿಸುವಿರಿ ತಾನೇ?

ಹಾಫಿಝ್ ಸುಫ್ಯಾನ್ ಸಖಾಫಿ-
(ಉಪಾಧ್ಯಕ್ಷ: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ)
16/8/2019. 9.35pm ಬೆಳಗಾವಿ

error: Content is protected !! Not allowed copy content from janadhvani.com