janadhvani

Kannada Online News Paper

ಪ್ರವಾಹದಲ್ಲಿ ಕೊಚ್ಚಿ ಹೋಯ್ತೇ..? ಮನುಷ್ಯನ ಅಹಂಕಾರ ಮತ್ತು ಅನಾಚಾರ…

✍️ಹಸೈನಾರ್ ಕಾಟಿಪಳ್ಳ

ಕಳೆದ ಸಾಲಿನಂತೆ ಈ ಸಲವೂ, ಕರ್ನಾಟಕ ಹಾಗೂ ನೆರೆಯ ರಾಜ್ಯವಾದ ಕೇರಳದಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ನೀರಿನ ಅಬ್ಬರ ಹೆಚ್ಚಾಗಿ, ಪ್ರವಾಹ ಉಂಟಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಈ ಸಲ ಕರ್ನಾಟಕದ ಪಾಲಿಗೆ ಹೆಚ್ಚಿನ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿಕೊಂಡಿದೆ. ಹಿಂದಿನ ವರ್ಷ ಕೊಡಗು ಜಿಲ್ಲೆಗೆ ಮಾತ್ರ ಸೀಮಿತಗೊಂಡಿದ್ದ ಪ್ರವಾಹ , ಈ ಸಲ ಉತ್ತರ ಕರ್ನಾಟಕ ಭಾಗದ ಹಲವು ಜಿಲ್ಲೆಗಳು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೂ ಆವರಿಸಿಕೊಂಡಿದೆ.

ಈ ಸಲ ಬೇಸಿಗೆ ಸಮಯದಲ್ಲಿ ವಿಪರೀತ ತಾಪಮಾನ ಏರಿಕೆಯಿಂದ ಉಂಟಾಗಿದ್ದ ಸುಡು ಬಿಸಿಲು ಹಾಗೂ ಅದರ ನಂತರ ಸುರಿಧಿರುವ ಧಾರಾಕಾರ ಮಳೆ , ಇವೆರಡೂ ಹಿರಿಯರ ಅನುಭವದಲ್ಲಿ ಇಲ್ಲದ ಮಾತು. ಮತ್ತೆ ಯಾವ ಕಾರಣಕ್ಕಾಗಿ ಈ ರೀತಿಯ ಪ್ರವಾಹಗಳು, ಇತ್ತೀಚಿನ ದಿನಗಳಲ್ಲಿ ಆಗಾಗ್ಗೆ ನಡೆಯುತ್ತದೆ ಎಂದು ನಾವು ಯೋಚಿಸುತ್ತಾ ಹೋದಲ್ಲಿ ಹಲವಾರು ಕಾರಣಗಳು ನಮಗೆ ಗೋಚರಿಸುತ್ತವೆ. ಅದರಲ್ಲಿ ಮುಖ್ಯವಾಗಿ ನಮಗೆ ಗೋಚರಿಸುವುದು, ಆಧುನಿಕ ಜಗತ್ತಿನಲ್ಲಿ ಮನುಷ್ಯ ಎಸಗುವ ಅನಾಚಾರ ಮತ್ತು ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಅಹಂಕಾರದ ಭಾವನೆ.

ಹೌದು, ಪರಸ್ಪರ ಪ್ರೀತಿ ಸ್ನೇಹದಿಂದ ಉತ್ತಮ ಬಾಂಧವ್ಯವನ್ನು ಹೊಂದಬೇಕಾಗಿದ್ದ ಮಾನವ ಇಂದು ತನ್ನ ಅಹಂಕಾರ ಬುದ್ದಿಯಿಂದ ಅದೆಲ್ಲವನ್ನೂ ಮರೆತು ಮೆರೆದಾಡುತ್ತಿದ್ದಾನೆ. ಇದು ಎಷ್ಟರ ಮಟ್ಟಿಗೆ ಬೆಳೆದಿದೆ ಎಂದರೆ, ತನ್ನನ್ನು ಸೃಷ್ಟಿಸಿದ ಸೃಷ್ಟಿಕರ್ತನೊಬ್ಬನಿದ್ದಾನೆ, ತನಗೂ ಒಂದು ದಿನ ಈ ಭೂಲೋಕವನ್ನು ಬಿಟ್ಟು ಹೋಗಲು ಇದೆ ಎಂಬೂದನ್ನೂ ಮರೆತು, ತಾನೇ ಮೇಲು, ತಾನು ಮಾಡಿದ್ದೇ ಸರಿ ಎನ್ನುವಷ್ಟರ ಮಟ್ಟಿಗೆ ಮಾನವನ ಚಿಂತೆ ಹೋಗಿದೆ. ತನ್ನ ನೆರೆಹೊರೆಯವರು ಒಂದು ಮನೆ ಕಟ್ಟಿದರೆ, ನನಗೂ ಅದಕ್ಕಿಂತ ಮಿಗಿಲಾದ ಮನೆ ಕಟ್ಟಬೇಕು, ತನ್ನ ಸ್ನೇಹಿತ ವಾಹನ ಖರೀದಿಸಿದರೆ, ತನಗೂ ಅದಕ್ಕಿಂತ ದುಬಾರಿ ಬೆಲೆಯ ಕಾರು ಖರೀದಿಸಬೇಕು, ತನಗೆ ಉನ್ನತ ಸ್ಥಾನಮಾನ ಬೇಕು, ತನ್ನನ್ನು ಎಲ್ಲರೂ ಗೌರವಿಸಬೇಕು, ಈ ರೀತಿ ಮನುಷ್ಯ ಪ್ರತಿಯೊಂದು ವಿಷಯದಲ್ಲೂ ತನ್ನ ಅಹಂಕಾರ ಭಾವವನ್ನು ವ್ಯಕ್ತಪಡಿಸುತ್ತಿದ್ದಾನೆ.

ಇನ್ನು ಅನಾಚಾರದ ವಿಷಯಕ್ಕೆ ಬಂದರೆ, ಅದನ್ನು ಹೇಳಿ ತೀರಲು ಸಾಧ್ಯವಿಲ್ಲ. ಅಷ್ಟೊಂದು ಅನಾಚಾರಗಳು ಇಂದಿನ ಆಧುನಿಕ ಯುಗದಲ್ಲಿ ನಡೆಯುತ್ತಿದೆ. ಹೆಣ್ಣಿನ ಮೇಲಿನ ಅತ್ಯಾಚಾರ, ಅದರಲ್ಲೂ ಅಪ್ರಾಪ್ತ ಪ್ರಾಯದ ಮಕ್ಕಳ ಮೇಲಿನ ಅತ್ಯಾಚಾರ, ರಾಜಕಾರಣಿಗಳು, ಅಧಿಕಾರಿಗಳು, ಪ್ರಭಾವಿ ವ್ಯಕ್ತಿಗಳು ನಡೆಸುವ ಭ್ರಷ್ಟಾಚಾರ, ಅನೀತಿ, ಧರ್ಮದ ಹೆಸರಿನಲ್ಲಿ ಅಮಾಯಕ ವ್ಯಕ್ತಿಗಳ ಹಾಗೂ ಆಸ್ತಿ ಅಂತಸ್ಥಿಗಾಗಿ ಸ್ವಂತ ಕುಟುಂಬದ ವ್ಯಕ್ತಿಗಳ ಕೊಲೆ, ಹೀಗೆ ಹುಡುಕುತ್ತಾ ಹೋದರೆ ನಮ್ಮ ಕಣ್ಣ ಮುಂದೆ ಹಲವಾರು ಅನಾಚಾರಗಳು ಎದ್ದು ಕಾಣುತ್ತವೆ. ಹೀಗೆ ಮನುಷ್ಯನ ಅಹಂಕಾರ ಮತ್ತು ಆತ ಎಸಗುವ ಅನಾಚಾರದ ಪರಿಣಾಮವಾಗಿಯೇ, ಇಂದು ಈ ಭೂಲೋಕಕ್ಕೆ ಇಂತಹ. ದುರಂತದ ಪರಿಸ್ಥಿತಿ ಬಂದೊದಗಿದೆ.

ದೃಷ್ಟಾಂತದಲ್ಲಿ ನಾವು ಕಲಿಯಲು ಬಹಳಷ್ಟು ಇದೆ ಎನ್ನುವ ಹಾಗೆ, ಈ ಪ್ರವಾಹದಲ್ಲೂ ನಮಗೆ ಬಹಳಷ್ಟು ಕಲಿಯಲು ಇದೆ. ಮನೆ, ಕಾರು ಎಲ್ಲದರಲ್ಲೂ ಪೈಪೋಟಿ ನಡೆಸಿ ಅಹಂಕಾರ ತೋರಿಸಿದ್ದ ಮನುಷ್ಯ, ಇಂದು ಪ್ರವಾಹಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿದ್ದಾನೆ. ತಾನು ಕಟ್ಟಿದ ಮನೆ, ತಾನು ಖರೀದಿಸಿದ ದುಬಾರಿ ಬೆಲೆಯ ಕಾರು, ಮಾನುಷ್ಯ ಆಸ್ಥಿ ಅಂತಸ್ತು ಎಲ್ಲವೂ ಪ್ರವಾಹದ ಮುಂದೆ ಶೂನ್ಯ. ಒಂದು ನಿಮಿಷದ ಪ್ರವಾಹ ಎಲ್ಲವನ್ನೂ ತನ್ನೆಡೆಗೆ ಸೆಳೆದುಕೊಂಡಿತು. ಧರ್ಮ ಧರ್ಮ ಎಂದು ಅಮಲೇರಿದಂತೆ ವರ್ತಿಸಿ, ತನ್ನ ಧರ್ಮದ ಕೆಲವೊಂದು ಜನರು ಭೋಧಿಸುವ ತಪ್ಪು ಕಲ್ಪನೆಯನ್ನು ಮನದಲ್ಲಿಟ್ಟು, ಇನ್ನೊಂದು‌ ಧರ್ಮದ ಅಮಾಯಕರ ಮೇಲೆ ಅಕ್ರಮವೆಸಗುತ್ತಿದ್ದ ಮನುಷ್ಯ, ಇಂದು ಪ್ರವಾಹದ ಅಬ್ಬರಕ್ಕೆ ಸಿಲುಕಿ ಎಲ್ಲಾ ಧರ್ಮ ಜಾತಿ, ವರ್ಗದ ಜನರೊಂದಿಗೆ ಆಶ್ರಯ ಪಡೆಯುತ್ತಿದ್ದಾನೆ.

ಧರ್ಮ ಎಂಬುದು ಆಯಾಯ ಸಂಸ್ಕೃತಿ , ಆಚರಣೆಗೆ ಸೀಮಿತವಾಗಿರಬೇಕೆ ಹೊರತು , ಅದು ಸಾರ್ವಜನಿಕವಾಗಿ ‌ಪ್ರಯೋಗ ಮಾಡಬಾರದು. ನಾವು ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ, ಇನ್ನೊಂದು ಧರ್ಮವನ್ನು ಗೌರವಿಸಬೇಕು. ನಾವೂ ಯಾವಾಗಲು ನಮ್ಮ ಮಟ್ಟಕ್ಕಿಂತ ಕೆಳಗಿನವರನ್ನು ನೋಡಿ, ಸೃಷ್ಟಿಕರ್ತ ನಮಗೆ ಇಷ್ಟಾದರೂ ಕರುಣಿಸಿದ್ದಾನಲ್ಲಾ ಎಂದು ತೃಪ್ತಿಪಡಬೇಕೆಯೇ ಹೊರತು ನಮಗಿಂತ ಮೇಲಿನವರನ್ನು ನೋಡಿ ಅಸೂಯೆ ಪಡಬಾರದು. ಆಸ್ತಿ ಅಂತಸ್ತಿಗಾಗಿ ಕುಟುಂಬದೊಳಗೆ ಬಡಿದಾಡಿಕೊಳ್ಳದೆ, ಎಲ್ಲರೂ ನಮ್ಮವರೆ ಎಂಬ ಭಾವನೆ ಹೊಂದಿ, ಕುಟುಂಬಗಳ ಮಧ್ಯೆ ಉತ್ತಮ ಬಾಂಧವ್ಯ ಕಲ್ಪಿಸಬೇಕು. ಪ್ರಕೃತಿ ಸಮತೋಲನದಲ್ಲಿದ್ದಾಗ ನಾವು ನಮ್ಮ ಸಂಕುಚಿತ ಮನೋಭಾವದಿಂದ ಧರ್ಮ ಧರ್ಮ ಅಂತ ಬಡಿದಾಡಿಕೊಳ್ಳುತ್ತೇವೆ. ಆದರೆ ಅದೇ ಪೃಕೃತಿ ವಿಕೋಪಕ್ಕೆ ತಿರುಗಿದಾಗ ನಮ್ಮ ಸಹಾಯಕ್ಕೆ ಬರುವುದು ಮಾನವೀಯತೆಯ ಧರ್ಮ ಹೊರತು ಬೇರೆ ಯಾವುದೂ ಅಲ್ಲ.

ಹೀಗೆ ನಾವು ನಮ್ಮ ಜೀವನದಲ್ಲಿ, ಎಲ್ಲಾ ಧರ್ಮದ ಜನರೊಂದಿಗೆ ಸೌಹಾರ್ದಯುತವಾಗಿ ಬದುಕಿ, ಕುಟುಂಬಗಳ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸಿ, ಮಾನವೀಯತೆಯ ಪ್ರತೀಕವನ್ನು ಸಾರಿ, ನಾವು ನಡೆಸುವ ಅಕ್ರಮ -ಅನಾಚಾರಗಳನ್ನು ಬದಿಗೊತ್ತಿ, ಒಂದು ಸುಸಜ್ಜಿತ ಸಮಾಜ ನಿರ್ಮಾಣಕ್ಕೆ ಪ್ರಯತ್ನ ಪಟ್ಟರೆ, ಖಂಡಿತವಾಗಿಯೂ ಇಂತಹ ವಿಕೋಪಗಳಿಂದ ನಾವು ರಕ್ಷೆ ಹೊಂದಬಹುದು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಭೀಕರ ಪ್ರಮಾಣದಲ್ಲಿ ಪ್ರವಾಹ ಉಂಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಸರ್ವಶಕ್ತನಾದ ಸೃಷ್ಟಿಕರ್ತ ನಮ್ಮೆಲ್ಲರನ್ನೂ ಇಂತಹ ದುರಂತಗಳಿಂದ ಕಾಪಾಡಲಿ ಎಂದು ಪ್ರಾರ್ಥಿಸುತ್ತಾ, ನೆರೆ ಸಂತ್ರಸ್ತರ ನೋವಿನಲ್ಲಿ ಪಾಲ್ಗೊಂಡು, ಅವರಿಗಾಗಿ ಪರಿಹಾರ ಒದಗಿಸಿ ಎಂಬ ವಿನಂತಿಯನ್ನು ನಿಮ್ಮ ಮುಂದಿಡುತ್ತಿದ್ದೇನೆ.

✍️ಹಸೈನಾರ್ ಕಾಟಿಪಳ್ಳ

error: Content is protected !! Not allowed copy content from janadhvani.com