ಮಂಗಳೂರು(ಆ. 10): ಉತ್ತರ ಕರ್ನಾಟಕ, ಮಲೆನಾಡು ಭಾಗದಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿರುವ ಬೆನ್ನಲ್ಲೇ ಕರಾವಳಿಯೂ ಪ್ರವಾಹಕ್ಕೆ ಬಲಿಯಾಗುವ ಸಾಧ್ಯತೆ ಎದುರಾಗಿದೆ. 2 ದಿನಗಳಿಂದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ಮಳೆಯಾಗುತ್ತಿರುವುದರಿಂದ ನೇತ್ರಾವತಿ ನದಿ ನೀರು ಹರಿದುಬರುತ್ತಿದ್ದು, ಬೆಳ್ತಂಗಡಿ, ಬಂಟ್ವಾಳದಲ್ಲಿ ಪ್ರವಾಹಸ್ಥಿತಿ ನಿರ್ಮಾಣವಾಗಿದೆ.
ನೇತ್ರಾವತಿ ನದಿ ತುಂಬಿ ಸೇತುವೆಯ ಮೇಲೆ ಹರಿಯುತ್ತಿದ್ದು, ಮನೆಗಳೆಲ್ಲ ಜಲಾವೃತವಾಗಿದೆ. ನೇತ್ರಾವತಿಯಲ್ಲಿ 11.6 ಮೀಟರ್ ಮಟ್ಟದಲ್ಲಿ ನೀರಿನ ಒಳಹರಿವು ಉಂಟಾಗಿದ್ದು, ಉಪ್ಪಿನಂಗಡಿ, ಬಂಟ್ವಾಳ ಪಟ್ಟಣ ಸಂಪೂರ್ಣ ಜಲಾವೃತವಾಗಿದೆ. ನೇತ್ರಾವತಿ ನದಿ ನೀರಿನ ಅಪಾಯದ ಮಟ್ಟ 8.5 ಮೀಟರ್ ಇದ್ದು, ಇದೀಗ 11.6 ಮೀಟರ್ಗೆ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕರಾವಳಿಯ ಜನರು ಆತಂಕದಲ್ಲಿದ್ದಾರೆ.
ನಿನ್ನೆ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇಗುಲದ ಬಳಿ ನೇತ್ರಾವತಿ ಮತ್ತು ಕುಮಾರಧಾರಾ ಸಂಗಮವಾಗಿದೆ. ಮೇ- ಜೂನ್ ತಿಂಗಳಲ್ಲಿ ಮಳೆಯಿಲ್ಲದೆ ಕುಡಿಯುವ ನೀರಿಗೂ ತತ್ವಾರವೆದ್ದಿದ್ದ ದಕ್ಷಿಣ ಕನ್ನಡದ ಪರಿಸ್ಥಿತಿ ಇಪ್ಪತ್ತು ದಿನಗಳಲ್ಲೇ ಬದಲಾಗಿದೆ. ಬಂಟ್ವಾಳ ತಾಲೂಕು ಪೂರ್ತಿ ಮುಳುಗಡೆಯಾಗಿದ್ದು, ಊರಿಗೆ ಊರೇ ಜಾಗ ಖಾಲಿ ಮಾಡುವಂತಾಗಿದೆ. ಇದೆಲ್ಲವನ್ನೂ ನೋಡುತ್ತಿರುವ ಮಂಗಳೂರಿಗರು 1974ರ ಮಹಾಪ್ರವಾಹವನ್ನು ನೆನಪಿಸಿಕೊಳ್ಳುತ್ತಿದ್ದಾರೆ. 45 ವರ್ಷಗಳ ಹಿಂದಿನ ಪ್ರವಾಹ ಮತ್ತೆ ಮರುಕಳಿಸುವ ಲಕ್ಷಣಗಳು ಕಂಡುಬರುತ್ತಿದೆ.
ಕಟೀಲಿನಲ್ಲೂ ನೆರೆಯ ಕಾಟ ಶುರುವಾಗಿದ್ದು, ನಂದಿನಿ ನದಿ ಉಕ್ಕೇರಿದೆ. ಇಲ್ಲಿನ ದೈವಗಳ ಸಾಮಗ್ರಿಗಳ ಸ್ಥಳಾಂತರ ಮಾಡಲಾಗಿದೆ. ಸುತ್ತಲಿನ ವ್ಯಾಪ್ತಿಯ ಹಲವು ಎಕರೆ ತೋಟಗಳು ಜಲಾವೃತವಾಗಿವೆ. ಬಂಟ್ವಾಳದಲ್ಲಿ 150ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿ ಸಿಲುಕಿರುವವರನ್ನು ಎನ್ಡಿಆರ್ಎಫ್ ಸಿಬ್ಬಂದಿ ರಕ್ಷಣೆ ಮಾಡುತ್ತಿದ್ದಾರೆ. ಬಂಟ್ವಾಳ, ಜಕ್ರಿಬೆಟ್ಟು ಸಂಪೂರ್ಣ ಜಲಾವೃತವಾಗಿದ್ದು, ಅಂಗಡಿ, ಮನೆಗಳೊಳಗೆ ನೆರೆ ನೀರು ನುಗ್ಗಿದೆ. ಹಲವು ಕುಟುಂಬಗಳ ಸ್ಥಳಾಂತರ ಮಾಡಲಾಗಿದೆ. ಬಂಟ್ವಾಳದ ಹಲವು ಕುಟುಂಬಗಳನ್ನು ಪಾಣೆಮಂಗಳೂರಿನ ಗಂಜಿಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ. ನಾವೂರು ಅಗ್ರಹಾರದ 50 ಮನೆಗಳು ಭಾಗಶಃ ಮುಳುಗಡೆಯಾಗಿವೆ.
ಎಲ್ಲ ಮಾರ್ಗಗಳೂ ಬಂದ್:
ಮಂಗಳೂರು ಭಾಗದ ಜನರು ಸುರಕ್ಷಿತ ಸ್ಥಳದತ್ತ ಹೋಗಲೂ ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಹಾಸನದಿಂದ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರ ಬಂದ್ ಆಗಿದೆ. ನಿನ್ನೆ ಇಲ್ಲಿ ಗುಡ್ಡ ಕುಸಿದಿದ್ದು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರಿನ ಸಂಪರ್ಕ ಕಡಿತಗೊಂಡಿದೆ. ಚಿಕ್ಕಮಗಳೂರಿನಿಂದ ದಕ್ಷಿಣ ಕನ್ನಡಕ್ಕೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಗುಡ್ಡ ಕುಸಿದಿದೆ. ಹೀಗಾಗಿ, ಇನ್ನೂ 4 ದಿನಗಳ ಕಾಲ ಚಾರ್ಮಾಡಿ ಘಾಟ್ ಸಂಚಾರ ಬಂದ್ ಆಗಿರಲಿದೆ.
ಇದರಿಂದಾಗಿ ಚಿಕ್ಕಮಗಳೂರು- ದಕ್ಷಿಣಕನ್ನಡ, ಧರ್ಮಸ್ಥಳ ಸಂಪರ್ಕ ಕಡಿತಗೊಂಡಿದೆ. ಸಂಪಾಜೆ ಘಾಟ್ ಕೂಡ ಯಾವಾಗ ಬೇಕಾದರೂ ಬಂದ್ ಆಗುವ ಸಾಧ್ಯತೆಯಿದೆ. ಕೊಲ್ಲೂರು ಘಾಟ್ಗೆ ಬರುವ ಹೆದ್ದಾರಿಯಲ್ಲೂ ಹಲವಾರು ಕಡೆ ಸೇತುವೆಗಳು ಕುಸಿದು ಬಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಹಾಗಾಗಿ, ಕುಂದಾಪುರ ಮಾರ್ಗವಾಗಿಯೂ ದಕ್ಷಿಣ ಕನ್ನಡಕ್ಕೆ ಬರಲು ಸಾಧ್ಯವಾಗದ ಸ್ಥಿತಿಯಿದೆ. ಸದ್ಯಕ್ಕೆ ಹುಲಿಕಲ್/ ಬಾಳೆಬರೆ ಘಾಟ್ ಮತ್ತು ಆಗುಂಬೆ ಘಾಟ್ ಮೂಲಕ ಹೋಗಲು ಅವಕಾಶವಿದೆ. ಆದರೆ, ಇವೆರಡೂ ಘಾಟ್ಗಳೂ ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವುದರಿಂದ ಯಾವಾಗ ಬೇಕಿದ್ದರೂ ಬಂದ್ ಆಗುವ ಸಾಧ್ಯತೆಯಿದೆ.