ಬೆಂಗಳೂರು(ಆ. 07): ಬಹುದಿನಗಳಿಂದ ನಿರೀಕ್ಷಿಸಿದ್ದ ಸಚಿವ ಸಂಪುಟ ರಚನೆಗೆ ಈ ವಾರದಲ್ಲಿ ಹೈ ಕಮಾಂಡ್ನಿಂದ ಅಂಕಿತ ಸಿಗಬಹುದೆಂಬ ವಿಶ್ವಾಸ ಮತ್ತೆ ಹುಸಿಯಾಗಿದೆ. ಸುಷ್ಮಾ ಸ್ವರಾಜ್ ಅಗಲಿಕೆ ಜೊತೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಹಿನ್ನೆಲೆ ಸಿಎಂ ಬಿಎಸ್ ಯಡಿಯೂರಪ್ಪ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದು, ಸಂಪುಟ ರಚನೆ ಕಸರತ್ತು ಇನ್ನೊಂದು ವಾರ ಮುಂದೂಡುವ ಸಾಧ್ಯತೆಗಳು ಹೆಚ್ಚಾಗಿವೆ.
ಈಗಾಗಲೇ ಏಕವ್ಯಕ್ತಿ ಆಡಳಿತ ನಡೆಸುತ್ತಿರುವ ಸಿಎಂ ಬಿಎಸ್ ಯಡಿಯೂರಪ್ಪ ನಡೆಗೆ ವಿಪಕ್ಷಗಳು ಅಕ್ಷೇಪ ವ್ಯಕ್ತಪಡಿಸಿವೆ. ಹೈ ಕಮಾಂಡ್ ನಿರ್ಧಾರದ ಹೊರತಾಗಿ ಬಿಎಸ್ವೈ ಸಂಪುಟ ವಿಸ್ತರಣೆ ಅಸಾಧ್ಯವಾಗಿದೆ. ಇದೇ ಕಾರಣಕ್ಕೆ ಎರಡು ದಿನಗಳ ಹಿಂದೆ ದೆಹಲಿಗೆ ಹೋಗಿದ್ದ ಸಿಎಂ ಬಿಎಸ್ವೈ ನಿನ್ನೆ ಪ್ರಧಾನಿ ಸೇರಿದಂತೆ ವಿವಿಧ ಕೇಂದ್ರ ಸಚಿವರನ್ನು ಭೇಟಿಯಾಗಿದ್ದರು. ಇಂದು ಅವರು ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭೇಟಿಯಾಗಿ ಸಂಪುಟ ರಚನೆ ಬಗ್ಗೆ ಅಂತಿಮ ಪಟ್ಟಿ ಪಡೆಯಬೇಕಿತ್ತು.
ಆದರೆ, ಅಚಾನಕ್ ಆಗಿ ಕರ್ನಾಟಕದ ಮನೆಮಗಳಾಗಿದ್ದ ಸುಷ್ಮಾ ಸ್ವರಾಜ್ ಸಾವನ್ನಪ್ಪಿದ್ದರು. ಇದರಿಂದಾಗಿ ಮಾಜಿ ಕೇಂದ್ರ ಸಚಿವೆಯ ಅಂತ್ಯ ಸಂಸ್ಕಾರದ ಬಳಿಕ ಅಮಿತ್ ಶಾ ಈ ಕುರಿತು ಚರ್ಚೆ ಮಾಡುವುದಾಗಿ ತಿಳಿಸಿದ್ದಾರೆ.
ಈ ನಡುವೆ ರಾಜ್ಯದಲ್ಲಿ ಉಂಟಾಗಿರುವ ಪ್ರವಾಹಕ್ಕೆ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಉತ್ತರ ಕರ್ನಾಟಕದಲ್ಲಿ ಒಂದು ದಿನ ಪ್ರವಾಹ ಸಮೀಕ್ಷೆ ನಡೆಸಿದ ಬಿಎಸ್ವೈ ಬಳಿಕ ದೆಹಲಿಗೆ ಹಾರಿದರು. ಪ್ರವಾಹದಿಂದ ಉತ್ತರ ಕರ್ನಾಟಕದ ಜನರು ಜಲಪ್ರಳಯಕ್ಕೆ ಬೆಚ್ಚಿದ್ದಾರೆ.
ಉತ್ತರಕರ್ನಾಟಕ, ಕರಾವಳಿ, ಮಲೆನಾಡು, ಉತ್ತರ ಕನ್ನಡ, ಕೊಡಗು, ಧಾರವಾಡದಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತಗೊಂಡಿದೆ. ಪ್ರವಾಹದಿಂದ ಜನರು ತತ್ತರಿಸುತ್ತಿದ್ದರೆ, ಮಂತ್ರಿಮಂಡಲವಿಲ್ಲದ ಸಿಎಂ ದೆಹಲಿಯಲ್ಲಿ ಕುಳಿತಿದ್ದಾರೆ. ರಾಜ್ಯದ ಜನರ ಸಮಸ್ಯೆಯನ್ನು ಆಲಿಸಲು ಸರ್ಕಾರವೇ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಟೀಕೆಗಳು ವಿಪಕ್ಷದಿಂದ ಕೇಳಿ ಬಂದ ಹಿನ್ನೆಲೆ ಸಿಎಂ ತಮ್ಮ ಪ್ರವಾಸ ಮೊಟಕುಗೊಳಿಸಿ ರಾಜ್ಯಕ್ಕೆ ಹಿಂದಿರುಗುತ್ತಿದ್ದಾರೆ.
ಇಂದು ಸಂಜೆಯೊಳಗೆ ಸಿಎಂ ಯಡಿಯೂರಪ್ಪ ರಾಜ್ಯಕ್ಕೆ ವಾಪಸ್ಸಾಗಲಿದ್ದು, ನಾಳೆ ಮತ್ತೆ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ನಾಳೆ 9.45ಕ್ಕೆ ಬೆಂಗಳೂರಿನಿಂದ ವಿಶೇಷ ವಿಮಾನ ಮೂಲಕ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಅವರು ರಸ್ತೆ ಮಾರ್ಗವಾಗಿ ಬೆಳಗಾವಿ ಜಿಲ್ಲೆಯ ಹುಕ್ಕೇರಿ, ಅಥಣಿ,ರಾಯಬಾಗ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.
ಬಳಿಕ ಜಮಖಂಡಿ, ಮುಧೋಳ ತಾಲೂಕಿನ ಮಳೆಯಿಂದ ಹಾನಿ ಪ್ರದೇಶಕ್ಕೆ ಭೇಟಿ ಪರಿಶೀಲನೆ ನಡೆಸಿದ ಸಂಜೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸುವ ಸಾಧ್ಯತೆ ಇದೆ.