ಬೆಳಗಾವಿ, ಆ.5- ಕೃಷ್ಣಾನದಿ ತುಂಬಿ ಹರಿಯುತ್ತಿರುವುದರಿಂದ ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳ ಜನರ ಬದುಕು ಬೀದಿಗೆ ಬಿದ್ದಿದ್ದು ಪ್ರವಾಹದಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಬೆಳಗಾವಿ, ಬಾಗಲಕೋಟೆ ನದೀ ತೀರದ ಪ್ರದೇಶಗಳು ಸಂಪೂರ್ಣವಾಗಿ ಮುಳುಗಡೆ ಭೀತಿ ಎದುರಿಸುತ್ತಿವೆ. ಅಥಣಿ ತಾಲ್ಲೂಕಿನ ಹುಲಿಗಬಾಳಿ ಗ್ರಾಮದ ಮಾರುತಿ ಜಾದವ್ ಎಮ್ಮೆ ರಕ್ಷಿಸಲು ಹೋಗಿ ಕೃಷ್ಣಾ ನದಿ ನೀರಿನ ಸೆಳೆತಕ್ಕೆ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಕುಂಭದ್ರೋಣ ಮಳೆ ಹಾಗೂ ಕೊಯ್ನಾ ಜಲಾಶಯದಿಂದ ನೀರು ಹರಿಬಿಟ್ಟ ಪರಿಣಾಮ ಬೆಳಗಾವಿ, ರಾಯಚೂರು, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು ಜನರ ಬದುಕು ಮೂರಾಬಟ್ಟೆಯಾಗಿದೆ. ಸೇತುವೆಗಳು ತುಂಬಿ ಹರಿಯುತ್ತಿದ್ದು ರೈತ ಬೆಳೆದ ಬೆಳೆ ನಾಶವಾಗಿದೆ.
ಕೃಷ್ಣಾ ನದಿ ಪಾತ್ರದ ಜಿಲ್ಲೆಗಳು ಜಲಾವೃತಗೊಂಡಿದ್ದು ಲಕ್ಷಾಂತರ ಜನರು ಸಂತ್ರಸ್ಥರಾಗಿದ್ದಾರೆ. ನಾರಾಯಣಪುರ ಜಲಾಶಯದಿಂದ ದಿನದಿಂದ ದಿನಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾನದಿಗೆ ನೀರು ಬಿಡುತ್ತಿರುವುದರಿಂದ ರಾಯಚೂರು ಜಿಲ್ಲೆಯ ಲಿಂಗಸೂಗೂರು ಜಿಲ್ಲೆಯ ಹಲವು ಗ್ರಾಮಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ.
ನೀರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಣಾ ಪಡೆಗಳು ರಕ್ಷಿಸುವ ಕಾಯಕದಲ್ಲಿ ನಿರತವಾಗಿವೆ. ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಬಹುತೇಕ ಗ್ರಾಮಗಳು ಪ್ರವಾಹದಿಂದಾಗಿ ನಡುಗಡ್ಡೆಗಳಾಗಿ ಮಾರ್ಪಟ್ಟಿವೆ. ಚಿಕ್ಕಪಡಸಲಗಿ ಬ್ಯಾರೇಜ್‌ಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆಯಲ್ಲಿ ಆ ಭಾಗದ ಜನರು ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.
ಬ್ಯಾರೇಜ್ ಮೇಲಿನ ಭಾಗದ ಧಾರವಾಡ, ವಿಜಯಪುರ ರಾಜ್ಯ ಹೆದ್ದಾರಿಯ ಸಂಪರ್ಕ ಬಂದ್ ಮಾಡಲಾಗಿದೆ. ಚಿಕ್ಕೋಡಿ ತಾಲ್ಲೂಕಿನ 331 ಕುಟಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗಿದೆ. ಅದರಲ್ಲಿ ಇಂಗಳಗಿಯ 188, ಯಡೂರವಾಡಿಯ 49, ಕಲ್ಲೋಳ ಗ್ರಾಮದ 42 ಕುಟುಂಬಗಳನ್ನು ಎನ್‌ಡಿಆರ್‌ಎಫ್ ಪಡೆಗಳು ರಕ್ಷಿಸಿದೆ.
ರಾಯಚೂರಿನ ಲಿಂಗಸೂಗೂರು ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಜಲಾವೃತಗೊಂಡರೂ ಸೂರಕ್ಷಿತ ಸ್ಥಳಗಳಿಗೆ ಬರಲು ಅಲ್ಲಿನ ಜನ ನಿರಾಕರಿಸಿರುವುದರಿಂದ ಅವರನ್ನು ಮನವೊಲಿಸುವುದು ಅಧಿಕಾರಿಗಳಿಗೆ ತ್ರಾಸದಾಯಕವಾಗಿದೆ.ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಯಡೂರಿನ ವೀರಭದ್ರೇಶ್ವರ ದೇವಸ್ಥಾನದ ಗರ್ಭಗುಡಿ ನೀರಿನಲ್ಲಿ ಮುಳುಗಡೆಯಾಗಿದೆ.
ಮಲೆನಾಡಿನಲ್ಲೂ ಮಳೆ ಅಬ್ಬರ:
ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಹಲವು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಲೆನಾಡು ಭಾಗದಲ್ಲಿ ಆ. 9ರ ವರೆಗೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.






