ಕೊಪ್ಪಳ: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಯಾಗಿದ್ದು, ಈವರೆಗೆ ಸಂಪುಟ ವಿಸ್ತರಣೆಯಾಗಿಲ್ಲ. ಸದ್ಯದ ಪರಿಸ್ಥಿತಿ ನೋಡಿದರೆ ಮುಂದಿನ ವರ್ಷ ಚುನಾವಣೆ ಎದುರಾಗಬಹುದು ಎಂದು ಕಾಂಗ್ರೆಸ್ ಮುಖಂಡ ಸಿ.ಎಂ ಇಬ್ರಾಹಿಂ ಹೇಳಿದರು.ನಗರದ ಖಾಸಗಿ ಹೊಟೇಲ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿಎಂ ಬಿಎಸ್ ವೈಗೆ ಶುಭವಾಗಲಿ. ಜನರಿಗೆ ಅವಶ್ಯ ಇಲ್ಲದ ತೀರ್ಮಾನ ಕೈಗೊಳ್ಳಬಾರದು. ಇನ್ನೂ ಕ್ಯಾಬಿನೆಟ್ ರಚನೆಯಾಗುವ ಲಕ್ಷಣಗಳಿಲ್ಲ. ನಮ್ಮನ್ನು ಬಿಟ್ಟು ಹೋದವರ ಅನುಮತಿಗಾಗಿ ಕಾಯುತ್ತಿದ್ದಾರೆ. ಅವರನ್ನು ಬಿಟ್ಟು ಉಳಿದ ಬಿಜೆಪಿಯವರನ್ನಾದರೂ ಮಂತ್ರಿ ಮಾಡಬಹುದು. ಕಂದಾಯ, ಸಮಾಜ ಕಲ್ಯಾಣ ಸೇರಿ ಪ್ರಮುಖ ಇಲಾಖೆ ನಿರ್ವಹಣೆಗೆ ಸಚಿವರು ಅಗತ್ಯ. ಇನ್ನೂ ಒಂದು ವರ್ಷಕ್ಕೆ ಮತ್ತೊಮ್ಮೆ ಚುನಾವಣೆ ಬರುವ ಲಕ್ಷಣ ಇದೆ. ರಾಜ್ಯದಲ್ಲಿ ಈ ಸ್ಥಿತಿ ಇರಬಾರದಿತ್ತು. ಇದು ದುರ್ದೈವ. ಅನರ್ಹರ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಅಗಿಲ್ಲ. ಜನರ ತೀರ್ಮಾನವೇ ಅಂತಿಮ ಎಂದು ಇಬ್ರಾಹಿಂ ಹೇಳಿದರು.
ಗೋಹತ್ಯೆ ನಿಷೇಧ ಬಗ್ಗೆ ಸಿಎಂ ಸ್ವ ಇಚ್ಛೆಯಿಂದ ಈ ಕೆಲಸ ಮಾಡಿಲ್ಲ. ಬೇರೆಯವರು ಯಡಿಯೂರಪ್ಪ ಅವರಿಂದ ಕೆಲಸ ಮಾಡಿಸುತ್ತಿದ್ದಾರೆ. ಅವರನ್ನು ಹತ್ತಿರದಿಂದ ನಾನು ಬಲ್ಲೆ. ಲಿಂಗಾಯತ, ಬಸವ ಕುಲದಿಂದ ಬಂದವರು ಅವರು.
ಗೋಹತ್ಯೆ ಕಾನೂನು ತಂದಿದ್ದು ಸಂತೋಷ. ಅದರಂತೆ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯದಲ್ಲಿ ಈ ಕಾಯಿದೆ ಜಾರಿಯಾಗಿಲ್ಲ. ಮೋದಿ ಅಧಿಕಾರಕ್ಕೆ ಬಂದ ಮೇಲೆ ವಿದೇಶಕ್ಕೆ ರಫ್ತಾಗುವ ಗೋವುಗಳು ಸಾಗಾಣೆ ಶೇ.36 ರಷ್ಟಿದೆ. ಇಲ್ಲಿ ತಿಂದರೆ ತಪ್ಪು, ದುಬೈ ನಲ್ಲಿ ತಿಂದರೆ ತಪ್ಪಲ್ಲವಾ?. ರೈತರು ಅನುಪಯೋಗಿ ಹಸುಗಳನ್ನು ಏನು ಮಾಡಬೇಕು. ಇದಕ್ಕೆ ಪರಿಹಾರ ಏನು ಎಂದು ಪ್ರಶ್ನಿಸಿದರು.
ನಮ್ಮ ಪಕ್ಷದಲ್ಲಿನ 13 ಜನ ಪತಿವ್ರತೆಯರು ರಾಜ್ಯ ಬಿಟ್ಟು ಮುಂಬೈ ಸೇರಿದರು. ಮೂರು ದಿವಸ ಲಾಡ್ಜ್ ನಲ್ಲಿಟ್ಟುಕೊಂಡು ಈಗ ಕೈ ಬಿಡಲಾಗಿದೆ. ಅವರೀಗ ದೇವದಾಸಿಯರಾಗಿದ್ದಾರೆ. ಬಿಜೆಪಿ ಸಹ ಬಹುಮತವಿಲ್ಲದೆ ಸರಕಾರ ರಚಿಸಿದೆ. ಬೇರೆಯವರಿಗೆ ಜನಿಸಿದ ಮಕ್ಕಳನ್ನು ತೆಗೆದುಕೊಂಡು ನಮ್ಮವರು ಎಂದು ಬಿಜೆಪಿಯವರು ಹೇಳುತ್ತಿದ್ದಾರೆ ಎಂದು ಅನರ್ಹಗೊಂಡ ಶಾಸಕರ ಬಗ್ಗೆ ಹೇಳಿದರು.






