ನವದೆಹಲಿ: ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ನಿವೇಶನ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸುವ ಪ್ರಯತ್ನ ವಿಫಲವಾಗಿದೆ. ಹಾಗಾಗಿ, ಇದೇ 6ರಿಂದ (ಮಂಗಳವಾರ) ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ನಿತ್ಯವೂ ನಡೆಯಲಿದೆ.
ನಿವೃತ್ತ ನ್ಯಾಯಮೂರ್ತಿ ಎಫ್.ಎಂ.ಐ. ಖಲೀಫುಲ್ಲಾ ನೇತೃತ್ವದ ಮೂವರು ಸದಸ್ಯರ ಸಮಿತಿಯು ಕೊಟ್ಟ ವರದಿಯನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಸಂವಿಧಾನ ಪೀಠವು ಪರಿಶೀಲಿಸಿತು.
‘ಮಧ್ಯಸ್ಥಿಕೆ ಪ್ರಕ್ರಿಯೆಯು ವಿವಾದವನ್ನು ಪರಿಹರಿಸುವಲ್ಲಿ ಯಶಸ್ವಿಯಾಗಿಲ್ಲ. ಹಾಗಾಗಿ ವಿಚಾರಣೆ ನಡೆಸಲಾಗುವುದು’ ಎಂದು ಪೀಠವು ಹೇಳಿತು. ಮೇಲ್ಮನವಿ ಸಲ್ಲಿಸಿರುವವರು ತಮ್ಮ ವಾದ ಮಂಡನೆಗೆ ಸಿದ್ಧರಾಗಬೇಕು. ಹಾಗೆಯೇ, ದಿನನಿತ್ಯದ ವಿಚಾರಣೆಗೆ ಅನುಕೂಲವಾಗುವಂತೆ ಅಗತ್ಯ ದಾಖಲೆಗಳನ್ನು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿ ಸಿದ್ಧಪಡಿಸಿಡಬೇಕು. ವಾದ–ಪ್ರತಿವಾದಗಳು ಪೂರ್ಣಗೊಳ್ಳುವವರೆಗೆ ನಿತ್ಯವೂ ವಿಚಾರಣೆ ನಡೆಯಲಿದೆ ಎಂದು ಪೀಠ ಹೇಳಿದೆ.
ರಾಮಜನ್ಮ ಭೂಮಿ- ಬಾಬರಿ ಮಸೀದಿ ವಿವಾದ ಇತ್ಯರ್ಥಗೊಳಿಸಲು ಸುಪ್ರೀಂಕೋರ್ಟ್ ಮೂವರು ಸದಸ್ಯರ ಸಮತಿ ನೇಮಕ ಮಾಡಿತ್ತು.ಆದರೆ ಕೆಲವೊಂದು ಪಕ್ಷಗಳು ಸಂಧಾನ ಸಮಿತಿ ಬಗ್ಗೆ ವಿರೋಧ ಸೂಚಿಸಿದ್ದವು.
ಮಾರ್ಚ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ಈ ಸಮಿತಿ ರಚಿಸಿದ್ದು, ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಲು ಸೂಚಿಸಲಾಗಿತ್ತು, ಸಮಿತಿಯು ಗುರುವಾರ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದು, ಈ ಬಗ್ಗೆ ಶುಕ್ರವಾರ ವಿಚಾರಣೆ ನಡೆಸಿದೆ.
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಫ್.ಎಂ. ಇಬ್ರಾಹಿಂ ಕಲೀಫುಲ್ಲಾ, ಆರ್ಟ್ ಆಫ್ ಲೀವಿಂಗ್ ಫೌಂಡೇಷನ್‌ನ ಶ್ರೀಶ್ರೀ ರವಿಶಂಕರ್ ಮತ್ತು ಹಿರಿಯ ವಕೀಲ ಶ್ರೀರಾಮ್ ಪಂಚು ಸಂಧಾನ ಸಮಿತಿಯ ಸದಸ್ಯರಾಗಿದ್ದಾರೆ. ವಿವಾದಕ್ಕೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸಮಿತಿಗೆ ಎಂಟು ವಾರಗಳ ಕಾಲಾವಕಾಶ ನೀಡಲಾಗಿತ್ತು.
ಏತನ್ಮಧ್ಯೆ, ದಾವೆ ಹೂಡಿದವರ ವಕೀಲ ಗೋಪಾಲ್ ಸಿಂಗ್ ವಿಶಾರದ್ ಅವರು ಸಂಧಾನ ಸಮತಿ ಕಡೆಯಿಂದ ಯಾವುದೇ ಬೆಳವಣಿಗೆಗಳು ಆಗದೇ ಇರವುದರಿಂದ ಆ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು.
ಅಯೋಧ್ಯೆ ವಿವಾದ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ 2010ರಲ್ಲಿ ತೀರ್ಪು ನೀಡಿ ಮೂರು ಕಕ್ಷಿದಾರರ ನಡುವೆ ವಿವಾದಿತ ನಿವೇಶನವನ್ನು ಸಮಾನವಾಗಿ ಹಂಚಿಕೆ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ 14 ಮೇಲ್ಮನವಿಗಳು ದಾಖಲಾಗಿವೆ.