ಬೆಂಗಳೂರು: ಬಿಜೆಪಿ ಪಕ್ಷದ ರಾಜ್ಯ ಹಾಗೂ ರಾಷ್ಟ್ರ ನಾಯಕರ ಮಹತ್ವಾಕಾಂಕ್ಷೆಯಂತೆ ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗಿದೆ ನಿಜ. ಆದರೆ, ಸರ್ಕಾರ ಉರುಳಿಸುವಲ್ಲಿ ತೋರಿದ ಆತುರ ಸರ್ಕಾರ ರಚನೆಯಲ್ಲಿ ಬಿಜೆಪಿ ತೋರುತ್ತಿಲ್ಲ ಎಂಬ ಅಂಶವೇ ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಏಕೆಂದರೆ ಬಿಜೆಪಿ ಕೇಂದ್ರದ ನಾಯಕರಿಗೆ ಆರಂಭದಿಂದಲೂ ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವ ಮನಸ್ಸಿಲ್ಲ ಎಂಬುದು ಬಹಿರಂಗ ಸತ್ಯ. ಆದರೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಿದರೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕೇಂದ್ರ ನಾಯಕರು ರಾಜ್ಯದಲ್ಲಿ ಸರ್ಕಾರ ರಚನೆಗೆ ಮನಸ್ಸು ಮಾಡುತ್ತಿಲ್ಲ ಎನ್ನಲಾಗುತ್ತಿದೆ.
ಆದರೆ, ಜುಲೈ.30ರ ಒಳಗಾಗಿ ರಾಜ್ಯದಲ್ಲಿ ಯಾವ ಪಕ್ಷವೂ ಸರ್ಕಾರ ರಚಿಸಲು ಮುಂದಾಗದಿದ್ದರೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಅಕಸ್ಮಾತ್ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾದರೆ 6 ತಿಂಗಳ ನಂತರ ಸ್ವಾಭಾವಿಕವಾಗಿ ಸಾರ್ವತ್ರಿಕ ಚುನಾವಣೆ ಎದುರಾಗುತ್ತದೆ. ಪ್ರಸ್ತುತ ಸಂದರ್ಭದಲ್ಲಿ ರಾಜ್ಯದಲ್ಲಿ ಚುನಾವಣೆ ನಡೆದರೆ ಬಿಜೆಪಿಗೆ ಸ್ಪಷ್ಟ ಬಹುಮತ ಲಭಿಸುತ್ತದೆ ಎಂಬುದು ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.
ಮುಂದಿನ ಆರು ತಿಂಗಳೊಳಗೆ ಇಂದಿನ ರಾಜ್ಯ ರಾಜಕೀಯ ಪರಿಸ್ಥಿತಿಯ ಕಾವು ಇಳಿದಿರುತ್ತದೆ. ಹೀಗಾಗಿ ಅಷ್ಟರೊಳಗೆ ಬಿಜೆಪಿ ನಿಯಮದಂತೆ 75 ವರ್ಷ ದಾಟಿರುವ ಯಡಿಯೂರಪ್ಪನವರಿಗೆ ವಿಶ್ರಾಂತಿ ನೀಡಿ ಬೇರೊಬ್ಬ ನಾಯಕನ ಮುಂದಾಳತ್ವದಲ್ಲಿ ಚುನಾವಣೆ ಎದುರಿಸುವುದು ಅಮಿತ್ ಶಾ ಅವರ ಮಾಸ್ಟರ್ ಪ್ಲಾನ್ ಎನ್ನಲಾಗುತ್ತಿದೆ.
ಒಂದು ವೇಳೆ ಇದು ನಿಜವಾದರೆ, ಅಮಿತ್ ಶಾ ಯೋಜನೆಯಂತೆ ಎಲ್ಲವೂ ನಡೆದರೆ 6 ತಿಂಗಳ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಲಿದೆ ಆದರೆ, ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಮಾತ್ರ ಎಲ್.ಕೆ. ಅಡ್ವಾನಿಯಂತೆ ಮನೆಯಲ್ಲಿ ವಿಶ್ರಾಂತಿ ಪಡೆಯುವುದು ದಿಟ.






