ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಪತನಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ತಮ್ಮ ದುರಾಸೆಯ ಅಧಿಕಾರದ ಹಾದಿಗೆ ಮೈತ್ರಿ ಸರ್ಕಾರ ಅಡ್ಡಿ ಎಂದುಕೊಂಡಿದ್ದವರಿಗೆ ಜಯವಾಗಿದೆ. ಪ್ರಜಾಪ್ರಭುತ್ವ ಮತ್ತು ಕರ್ನಾಟಕದ ಜನರು ಸೋತು ಹೋಗಿದ್ದಾರೆ’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಂಡಿಸಿದ ವಿಶ್ವಾಸಮತ ನಿರ್ಣಯಕ್ಕೆ ಸೋಲಾಗುವುದರೊಂದಿಗೆ 14 ತಿಂಗಳು ಅಧಿಕಾರದಲ್ಲಿದ್ದ ಜೆಡಿಎಸ್–ಕಾಂಗ್ರೆಸ್ ಮೈತ್ರಿ ಸರ್ಕಾರವು ಮಂಗಳವಾರ ಪತನಗೊಂಡಿತು.
‘ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಒಳಗಿನ ಮತ್ತು ಹೊರಗಿನ ಪಟ್ಟಭದ್ರ ಹಿತಾಸಕ್ತಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಅಧಿಕಾರದ ಹಾದಿಗೆ ಮೈತ್ರಿ ಸರ್ಕಾರ ಒಂದು ಅಡ್ಡಿ ಎಂದೇ ಅವರು ಭಾವಿಸಿದ್ದರು. ಕೊನೆಗೂ ಅವರ ದುರಾಸೆಗೇ ಗೆಲುವಾಯಿತು. ಆದರೆ ಪ್ರಜಾಪ್ರಭುತ್ವ, ಪ್ರಾಮಾಣಿಕತೆ ಮತ್ತು ಕರ್ನಾಟಕದ ಜನರು ಸೋತು ಹೋದರು’ ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಮೈತ್ರಿ ಸರ್ಕಾರ ಪತನದ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕಾ ಗಾಂಧಿ ವದ್ರಾ, ‘ಎಲ್ಲವನ್ನೂ ನಮ್ಮ ಮುಷ್ಟಿಯಲ್ಲಿ ಹಿಡಿದಿಟ್ಟುಕೊಳ್ಳಲು ಆಗುವುದಿಲ್ಲ, ಎಲ್ಲವೂ ಸಿಗುವುದಿಲ್ಲ, ಎಲ್ಲರನ್ನೂ ಹೆದರಿಸಲು ಆಗುವುದಿಲ್ಲ. ಕಾಲಾನುಕ್ರಮದಲ್ಲಿ ಎಲ್ಲ ಸುಳ್ಳುಗಳೂ ಹೊರಗೆ ಬರುತ್ತವೆ’ ಎಂದು ಪ್ರತಿಕ್ರಿಯಿಸಿದ್ದರು.
‘ಇಷ್ಟೆಲ್ಲಾ ಆಗುವವರೆಗೂ ದೇಶದ ಜನರು ಅವರ (ಬಿಜೆಪಿ ನಾಯಕರ) ಅನಿರ್ಬಂಧಿತ ಭ್ರಷ್ಟಾಚಾರ, ಜನರ ಹಿತಾಸಕ್ತಿ ಕಾಪಾಡುವ ಸಾಂವಿಧಾನಿಕ ಸಂಸ್ಥೆಗಳ ಶಕ್ತಿಯನ್ನು ವ್ಯವಸ್ಥಿತವಾಗಿ ಹಾಳುಮಾಡುವ ದುಸ್ಸಾಹಸ, ಹತ್ತಾರು ದಶಕಗಳ ತ್ಯಾಗ ಮತ್ತು ಬಲಿದಾನದಿಂದ ವಿಕಸನಗೊಂಡಿರುವ ಪ್ರಜಾಪ್ರಭುತ್ವವನ್ನು ಶಕ್ತಿಹೀನಗೊಳಿಸುವ ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಮಂಗಳವಾರ ವಿಶ್ವಾಸಮತದಲ್ಲಿ ಸೋಲನುಭವಿಸಿದ ಬೆನ್ನಿಗೇ ಮಧ್ಯರಾತ್ರಿ ಪ್ರಿಯಾಂಕಾ ಗಾಂಧಿ ಅವರು ಬಿಜೆಪಿ ವಿರುದ್ಧ ಟ್ವೀಟ್ ದಾಳಿ ನಡೆಸಿದ್ದಾರೆ.ಬಿಜೆಪಿಯವರಿಗೆ ಸತ್ಯದ ಅರಿವಾಗುವ ಕಾಲ ಬರುತ್ತದೆ. ಅಲ್ಲಿಯವರೆಗೂ ಜನರು ಬಿಜೆಪಿಯ ಆಟಾಟೋಪಗಳನ್ನು ಸಹಿಸಿಕೊಳ್ಳಬೇಕಾಗುತ್ತದೆ ಎಂದು ಪ್ರಿಯಾಂಕಾ ಗಾಂಧಿ ಎರಡು ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.
‘‘ಎಲ್ಲವನ್ನೂ ಖರೀದಿ ಮಾಡಲು ಸಾಧ್ಯವಿಲ್ಲ. ಎಲ್ಲರನ್ನೂ ಬೆದರಿಸಲೂ ಅಸಾಧ್ಯ ಎಂಬ ಸತ್ಯ ಬಿಜೆಪಿಗೆ ಒಂದು ದಿನ ಮನವರಿಕೆಯಾಗುತ್ತದೆ. ಅವರ ಪ್ರತಿಯೊಂದು ಸುಳ್ಳೂ ಒಂದು ದಿನ ಬೆತ್ತಲೆಯಾಗುತ್ತದೆ’’ ಎಂದು ಮೊದಲ ಟ್ವೀಟ್‌ನಲ್ಲಿ ಪ್ರಿಯಾಂಕಾ ತಿಳಿಸಿದ್ದಾರೆ.
ಅಲ್ಲಿಯವರೆಗೂ ಭಾರತದ ಪ್ರಜೆಗಳು ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಜನರ ಹಿತಾಸಕ್ತಿ ರಕ್ಷಿಸಲು ಸ್ಥಾಪಿತವಾದ ಸಂಸ್ಥೆಗಳು ನಾಶವಾಗುವುದನ್ನು ಹಾಗೂ ದಶಕಗಳ ಕಾಲ ಬೆವರು ಹರಿಸಿ ಬಲಿದಾನ ಮಾಡಿ ಬಂದಿರುವ ಪ್ರಜಾತಂತ್ರ ವ್ಯವಸ್ಥೆ ದುರ್ಬಲಗೊಳ್ಳುವುದನ್ನು ನೋಡಿಕೊಂಡಿರಬೇಕಾಗುತ್ತದೆ’’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಪ್ರಿಯಾಂಕಾ ಅಭಿಪ್ರಾಯಪಟ್ಟಿದ್ದಾರೆ.