janadhvani

Kannada Online News Paper

ಕರ್ನಾಟಕದಂತೆ ಎಲ್ಲೆಡೆ ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ-ಮಮತಾ ಬ್ಯಾನರ್ಜಿ

ಕೋಲ್ಕತ: ಕೇಂದ್ರ ಸರಕಾರ ಟಿಎಂಸಿ ನಾಯಕರನ್ನು ಬೆದರಿಸುತ್ತಿದ್ದು, ಬಿಜೆಪಿ ಸೇರದಿದ್ದರೆ ಚಿಟ್‌ಫಂಡ್ ಹಗರಣದಲ್ಲಿ ಸಿಲುಕಿಸಿ ತನಿಖಾ ಸಂಸ್ಥೆಗಳ ಮೂಲಕ ತನಿಖೆ ನಡೆಸುವುದಾಗಿ ಹೆದರಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಟಿಎಂಸಿ ವತಿಯಿಂದ ನಡೆದ ಹುತಾತ್ಮ ದಿನದ ರ‍್ಯಾಲಿ ಉದ್ದೇಶಿಸಿ ಭಾನುವಾರ ಮಾತನಾಡಿದ ಮಮತಾ ಬ್ಯಾನರ್ಜಿ, ಜುಲೈ 26ರಿಂದ ರಾಜ್ಯವ್ಯಾಪಿ ಹೋರಾಟ ಆರಂಭಿಸುವುದಾಗಿ ಹೇಳಿದರು.

ಭರವಸೆ ನೀಡಿದಂತೆ ಬಿಜೆಪಿಯು 15 ಲಕ್ಷ ರೂ.ಗಳನ್ನು ಜನರಿಗೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.“ನೀವು ಟಿಎಂಸಿ ಜೊತೆ ಕಟ್ ಮನಿ ಕೇಳುತ್ತಿದ್ದೀರಾ? ನೀವು ಭರವಸೆ ನೀಡಿದ್ದ 15 ಲಕ್ಷ ರೂ.ಗಳನ್ನು ನೀಡಿ” ಎಂದವರು ಹೇಳಿದರು.

ಬಿಜೆಪಿ ಜತೆ ಸಂಪರ್ಕಕ್ಕೆ ಸಿಗದಿದ್ದರೆ ಚಿಟ್‌ಫಂಡ್ ಹಗರಣ ಮತ್ತು ಇತರ ಹಗರಣಗಳಲ್ಲಿ ಸಿಲುಕಿಸಿ ಜೈಲಿಗೆ ಅಟ್ಟಲಾಗುವುದು ಎಂದು ಕೇಂದ್ರ ತನಿಖಾ ಸಂಸ್ಥೆಗಳು ಟಿಎಂಸಿ ಶಾಸಕರು ಮತ್ತು ಇತರ ಚುನಾಯಿತ ಪ್ರತಿನಿಧಿಗಳನ್ನು ಬೆದರಿಸುತ್ತಿವೆ ಎಂದು ದೀದಿ ಆರೋಪಿಸಿದರು.

ಟಿಎಂಸಿ ಶಾಸಕರಿಗೆ ಬೆದರಿಕೆ ಹಾಗೂ ಆಮಿಷಗಳನ್ನು ಒಡ್ಡಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಬಿಜೆಪಿಗೆ ಪಕ್ಷಾಂತರ ಮಾಡುವ ನಮ್ಮ ಪ್ರತಿಯೊಬ್ಬ ಶಾಸಕನಿಗೆ 2 ಕೋಟಿ ರೂ ಮತ್ತು ಪೆಟ್ರೋಲ್ ಪಂಪ್‌ ನೀಡುವುದಾಗಿ ಬಿಜೆಪಿ ಆಮಿಷ ಒಡ್ಡುತ್ತಿದೆ. ಕರ್ನಾಟಕದಂತೆ ಎಲ್ಲೆಡೆ ಕುದುರೆ ವ್ಯಾಪಾರದಲ್ಲಿ ಬಿಜೆಪಿ ತೊಡಗಿದೆ’ ಎಂದು ಬ್ಯಾನರ್ಜಿ ದೂರಿದರು.

ಕೇಂದ್ರದ ಬಿಜೆಪಿ ಸರಕಾರ 2 ವರ್ಷಕ್ಕಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಇರುವುದಿಲ್ಲ ಎಂದು ಮಮತಾ ಹೇಳಿಕೊಂಡರು.