janadhvani

Kannada Online News Paper

ಮಂಗಳೂರು: ತಪ್ಪಿದ ಭಾರೀ ದುರಂತ- ಪೈಲೆಟ್ ನ ಸಮಯ ಪ್ರಜ್ಞೆಯಿಂದ ಬದುಕುಳಿಯಿತು 189 ಜೀವ

ಮಂಗಳೂರು,ಜೂನ್.30: ಬಜಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ಕೊದಲೆಲೆ ಅಂತರದಲ್ಲಿ ತಪ್ಪಿದ್ದು, ಕೊಂಚ ಎಡವಟ್ಟಾಗಿದ್ದರೆ 2010ರ ವಿಮಾನ ದುರಂತ ಘಟನೆಗೆ ಮಂಗಳೂರು ಮತ್ತೆ ಸಾಕ್ಷಿಯಾಗುತ್ತಿತ್ತು.

ದುಬೈನಿಂದ ರವಿವಾರ ಸಂಜೆ 5:40ರ ಸುಮಾರಿಗೆ ಆರು ಮಂದಿ ಸಿಬ್ಬಂದಿ ಸಹಿತ 189 ಮಂದಿ ಪ್ರಯಾಣಿಕರಿದ್ದ ಏರ್‌ಇಂಡಿಯಾ ಎಕ್ಸ್‌ಪ್ರೆಸ್ (ಐಎಕ್ಸ್ 384) ವಿಮಾನ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ವಿಮಾನ ಲ್ಯಾಂಡಿಂಗ್ ವೇಳೆ ಟ್ಯಾಕ್ಸಿ ವೇನಲ್ಲಿ ಸಾಗುತ್ತಿದ್ದಾಗ ಆಕಸ್ಮಿಕವಾಗಿ ಜಾರಿತ್ತು. ಇದರಿಂದಾಗಿ ವಿಮಾನ ಪೂರ್ತಿ ಟ್ಯಾಕ್ಸಿ ವೇ ಬಿಟ್ಟು ಮಣ್ಣಿನ ಇಳಿಜಾರು ಪ್ರದೇಶಕ್ಕೆ ಇಳಿದಿತ್ತು. ವಿಮಾನ ಚಕ್ರಗಳು ಮಣ್ಣಿನಲ್ಲಿ ಪೂರ್ತಿ ಹೂತುಹೋಗಿ, ಅಲ್ಲಿಯೇ ವಿಮಾನ ಲ್ಯಾಂಡ್ ಆಗಿದ್ದರಿಂದ ಸಂಭಾವ್ಯ ದುರಂತವೊಂದು ತಪ್ಪಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ವಿಮಾನ ತಜ್ಞರು ಸ್ಥಳಕ್ಕೆ ಆಗಮಿಸಿ ತಪಾಸಣೆ ನಡೆಸುತ್ತಿದ್ದು, ವಿಮಾನದ ಯಾವ ಭಾಗಗಳಿಗೆ ಹಾನಿಯಾಗಿದೆ ಎಂಬುದರ ಪರಿಶೀಲನೆ ನಡೆಸುತ್ತಿದ್ದಾರೆ. ಇಳಿಯುತ್ತಿದ್ದ ವೇಳೆ ಮಿತಿಗಿಂತ ವೇಗ ಇದ್ದುದೇ ಈ ಅವಘಡಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಈ ಘಟನೆ ಕುರಿತು ಆಂತರಿಕ ತನಿಖೆ ನಡೆಸುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಆದೇಶಿಸಿದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮೂಲಗಳು ತಿಳಿಸಿವೆ.

ವಿಮಾನ ಇಳಿದ ವೇಗ ಎಷ್ಟಿತ್ತೆಂದರೆ, ಇನ್ನು 20 ಅಡಿ ಮುಂದೆ ಹೋಗಿದ್ದರೆ ಈ ಹಿಂದೆ ದುರಂತ ಸಂಭವಿಸಿದ ಕಂದಕಕ್ಕೆ ಉರುಳಿ ಭಾರೀ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎನ್ನಲಾಗಿದೆ. ಆದರೆ ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

ವಿಮಾನ ರನ್ ವೇಯಲ್ಲಿ ಇಳಿಯುವ ವೇಗ ಕಂಡು ಅದರೊಳಗಿದ್ದ ಪ್ರಯಾಣಿಕರು ಬೆಚ್ಚಿ ಬಿದ್ದಿದ್ದರು. ಅಲ್ಲದೆ, ಘಟನೆ ಸಂಭವಿಸಿದ ವೇಳೆ ವಿಮಾನ ನಿಲ್ದಾಣದಲ್ಲಿನ ಕಾರ್ಮಿಕರು ಕೂಡ ದಿಕ್ಕಾಪಾಲಾಗಿ ಓಡಿದ್ದರು ಎನ್ನಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಕ್ಕೆ ಕಾದಿದ್ದ ಪ್ರಯಾಣಿಕರು ಕೂಡ ಈ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ.

ಪ್ರತಿಕೂಲ ಹವಾಮಾನ ಕಾರಣ?

‘ಅಲ್ಪ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ವಿಮಾನ ಇಳಿಸಲು ಪ್ರತಿಕೂಲ ಹವಾಮಾನವಿದೆ’ ಎಂದು ವಿಮಾನದ ಪೈಲೆಟ್‌ವೊಬ್ಬರು ಎಚ್ಚರಿಕೆಯ ಮನವಿ ಕೊಟ್ಟಿದ್ದರು ಎಂದು ಪ್ರಯಾಣಿಕರೊಬ್ಬರು ಮಾಹಿತಿ ಹಂಚಿಕೊಂಡಿದ್ದಾರೆ.

ಮಂಗಳೂರಿಗೆ ಆಗಮಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ಆಗುವ ಮೊದಲು ಪೈಲೆಟ್ ಪ್ರಯಾಣಿಕರಿಗೆ ಒಂದು ಸೂಚನೆ ನೀಡಿದ್ದರು. ಈ ಮೊದಲು ನಾವು ವಿಮಾನಿದಿಂದ ಇಳಿಯಲು ತಯಾರಾಗಿದ್ದೇವು. ಇನ್ನೇನು ವಿಮಾನ ಲ್ಯಾಂಡಿಂಗ್ ಆಗುವ ಸಮಯ ವಿಪರೀತ ಮಳೆ ಸುರಿಯುತ್ತಿತ್ತು. ನೆಲದಲ್ಲಿ ಏನೂ ಗೋಚರಿಸುತ್ತಿರಲಿಲ್ಲ. ಆದರೆ ಪೈಲೆಟ್ ವಾಯು ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಹೇಳಿದರು.

ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶಿಸಲು ಪ್ರತಿಕೂಲ ವಾತಾವರಣ ಇದ್ದರಿಂದ ಸುಮಾರು 20ರಿಂದ 25 ನಿಮಿಷಗಳ ಕಾಲ ವಿಮಾನವನ್ನು ಮೇಲೆ ಹಾರಾಡಿಸಿದ್ದಾರೆ. ಕೊನೆಗೆ ವಿಧಿಯಿಲ್ಲದೆ ವಿಮಾನವನ್ನು ರನ್‌ವೇ ಗೆ ಇಳಿಸಿದ್ದಾರೆ. ನಾವು ವಿಮಾನದಿಂದ ಹೊರಗೆ ಬರಲು ಒಂದು ಗಂಟೆ ಸಮಯ ಹಿಡಿಯಿತು ಎಂದು ಅವರು ತಿಳಿಸಿದ್ದಾರೆ.

ಬಳಿಕ ನಿಲ್ದಾಣದ ಸಿಬ್ಬಂದಿ ಪ್ರಯಾಣಿಕರನ್ನು ಕರೆದೊಯ್ದರು. ಜತೆಗೆ ಲಗೇಜ್‌ಗಳನ್ನು ಹೊರತೆಗೆದುಕೊಂಡು ಹೋಗಲು ಅವಕಾಶವಾಯಿತು. ಪೈಲೆಟ್‌ನ ಸಮಯ ಪ್ರಜ್ಞೆಯಿಂದ ಎಲ್ಲ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದರು. ನಾವು ನಿಜವಾಗಲೂ ಪೈಲೆಟ್‌ನ್ನು ಪ್ರಶಂಸಿಸಬೇಕು ಎಂದು ಪ್ರಯಾಣಿಕರೊಬ್ಬರು ಸ್ಮರಿಸಿದರು.

2010ರ ಮೇ 23ರಂದು ದುಬೈನಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ರನ್‌ವೇನಲ್ಲಿ ಜಾರಿದ ಪರಿಣಾಮ 158 ಮಂದಿ ಪ್ರಯಾಣಿಕರು ಸಾವಿಗೀಡಾಗಿದ್ದು, ಎಂಟು ಮಂದಿ ಬದುಕುಳಿದಿದ್ದರು.

error: Content is protected !! Not allowed copy content from janadhvani.com