ಸಲಾಲ: ಒಮಾನ್‌ನಲ್ಲಿ ಚಲಾವಣೆಯಲ್ಲಿರುವ ಕೆಲವು ಹಳೆಯ ಬ್ಯಾಂಕ್ ನೋಟುಗಳನ್ನು ಇನ್ನು ಮುಂದೆ ಒಂದು ತಿಂಗಳ ವರೆಗೆ ಮಾತ್ರ ಉಪಯೋಗಿಸಬಹುದು ಎಂದು ಅಲ್ಲಿನ ಸೆಂಟ್ರಲ್ ಬ್ಯಾಂಕ್ ತಿಳಿಸಿದೆ. 1995 ರ ನವೆಂಬರ್ ಒಂದರ ಮೊದಲು ಮುದ್ರಿಸಲಾದ ನೋಟುಗಳನ್ನು ಹಿಂಪಡೆಯುವುದಕ್ಕೆ ಸೆಂಟ್ರಲ್ ಬ್ಯಾಂಕ್ ಮುಂದಾಗಿದೆ.
ಹಳೆಯ ಕರೆನ್ಸಿ ಇದ್ದಲ್ಲಿ ಸೆಂಟ್ರಲ್ ಬ್ಯಾಂಕ್ ಶಾಖೆಗಳಿಗೆ ನೀಡಿ ಹೊಸತನ್ನು ಪಡೆಯುವಂತೆ ತಿಳಿಸಲಾಗಿದೆ. ಸೆಂಟ್ರಲ್ ಬ್ಯಾಂಕಿನ ರೂವಿ ಹೆಡ್ ಆಫೀಸ್, ಸಲಾಲಾ, ಸೋಹಾರ್ ಮುಂತಾದೆಡೆ ಇರುವ ಬ್ರಾಂಚ್‌ಗಳಲ್ಲೋ ಬದಲಾವಣೆ ಮಾಡಬಹುದಾಗಿದೆ.
ಒಂದು ತಿಂಗಳ ಬಳಿಕ ಸದ್ರಿ ನೋಟುಗಳು ಚಲಾವಣೆಯಲ್ಲಿ ಇರುವುದಿಲ್ಲ. ಇವುಗಳ ಮೂಲಕ ಮಾಡಲಾಗುವ ವ್ಯವಹಾರಗಳನ್ನು ಅನಧಿಕೃತವಾಗಿ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1972ರಲ್ಲಿ ಒಮಾನ್ ಕರೆನ್ಸಿ ಬೋರ್ಡ್‌ನ ವತಿಯಿಂದ ಹೊರಡಿಸಲಾದ 100 ಬೈಸ, ಕಾಲು ರಿಯಾಲ್, ಅರ್ಧ ರಿಯಾಲ್, ಒಂದು ರಿಯಾಲ್, ಐದು ಮತ್ತು ಹತ್ತು ರಿಯಾಲ್‌ಗಳು ಕೂಡ ಮೌಲ್ಯವನ್ನು ಕಳೆದು ಕೊಳ್ಳಲಿದೆ. 1995 ರ ನವೆಂಬರ್ ಒಂದರಂದು ಹೊರಡಿಸಲಾದ ನೋಟುಗಳನ್ನು ಕೂಡ ಬದಲಾಯಿಸ ಬೇಕು.
ಮುಂಭಾಗದಲ್ಲಿ ಹೊಳೆಯುವ ಹೋಲೋಗ್ರಫಿ ಸೆಕ್ಯೂರಿಟಿ ಲೈನ್ ಇಲ್ಲದ ಎಲ್ಲಾ 50 ರಿಯಾಲ್, 20, 10, 5 ರಿಯಾಲ್‌ಗಳ ನೋಟುಗಳಿಗೂ ನಿಷೇಧ ಅನ್ವಯಿಸುತ್ತದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.