janadhvani

Kannada Online News Paper

ಈಮಾನ್(ಧಾರ್ಮಿಕ ನಂಬಿಕೆ)ಗೆ ಅಡ್ಡಿ: ಬಾಲಿವುಡ್‌ ತೊರೆಯಲು ನಿರ್ಧರಿಸಿದ ನಟಿ ಝೈರಾ ವಾಸಿಂ

ಬೆಂಗಳೂರು: ‘ಧರ್ಮದ ಜೊತೆಗಿನ ಸಂಬಂಧಕ್ಕೆ ಸಿನಿಮಾ ಜೀವನ ಅಡ್ಡಿಯುಂಟುಮಾಡುತ್ತದೆ’ ಎಂಬ ಕಾರಣಕ್ಕೆ ಇದೀಗ 18ರ ಹರೆಯಲ್ಲಿರುವ ಕಾಶ್ಮೀರ ಮೂಲದ ನಟಿ ಝೈರಾ ವಾಸಿಂ ಬಾಲಿವುಡ್‌ ಗೆ ಗುಡ್ ಬೈ ಹೇಳಲು ನಿರ್ಧರಿಸಿದ್ದಾರೆ.

ಈ ಕುರಿತು ತಮ್ಮ ಫೇಸ್‌ಬುಕ್ ಪುಟದಲ್ಲಿ ಸುದೀರ್ಘ ಪೋಸ್ಟ್ ಬರೆದುಕೊಂಡಿರುವ ಝೈರಾ, ‘ಐದು ವರ್ಷಗಳ ಹಿಂದೆ ನಾನು ತೆಗೆದುಕೊಂಡ ಒಂದು ನಿರ್ಧಾರವು ನನ್ನ ಬದುಕನ್ನು ಶಾಶ್ವತವಾಗಿ ಬದಲಿಸಿತು. ಬಾಲಿವುಡ್‌ಗೆ ಹೆಜ್ಜೆ ಇಟ್ಟೆ, ಅದು ನನಗೆ ಜನಪ್ರಿಯತೆಯನ್ನು ತಂದುಕೊಟ್ಟಿತು. ನನ್ನನ್ನು ಯುವಜನರ ರೋಲ್ ಮಾಡೆಲ್ ಎಂದು ಹಲವರು ಕೊಂಡಾಡಿದರು. ಆದರೆ ನನಗೆ ಎಂದಿಗೂ ಹಾಗೆ ಆಗಬೇಕು ಅಂತ ಅನ್ನಿಸಿಯೇ ಇರಲಿಲ್ಲ. ಸೋಲು ಮತ್ತು ಗೆಲುವನ್ನು ನಾನು ಅರ್ಥಮಾಡಿಕೊಳ್ಳುವ ರೀತಿಯೇ ಬೇರೆ. ಅದು ಈಗ ನನಗೂ ಅರ್ಥವಾಗುತ್ತಿದೆ. ಇಂದಿಗೆ ನಾನು ಚಿತ್ರಜಗತ್ತಿಗೆ ಪದಾರ್ಪಣೆ ಮಾಡಿ ಐದು ವರ್ಷಗಳಾಗುತ್ತವೆ. ಚಿತ್ರನಟಿಯಾಗಿ ನಾನು ಸಂತೋಷದಿಂದ ಇಲ್ಲ ಎಂಬ ನಿಜವನ್ನು ನಾನು ಒಪ್ಪಿಕೊಳ್ಳಲೇ ಬೇಕಾಗಿದೆ. ನಾನು ಇನ್ಯಾರೋ ಆಗಲು ಕಷ್ಟಪಡುತ್ತಿದ್ದೇನೆ ಎಂದು ತುಂಬಾ ಅನ್ನಿಸುತ್ತಿತ್ತು’ ಎಂದು ಹೇಳಿಕೊಂಡಿದ್ದಾರೆ.

ಸಮಯ, ಶ್ರಮ ಮತ್ತು ಭಾವನೆಗಳನ್ನು ತೊಡಗಿಸಿ ನಾನು ಮಾಡುತ್ತಿದ್ದ ಕೆಲಸಗಳು ನನ್ನೊಳಗೆ ತಳಮಳ ಹುಟ್ಟುಹಾಕುತ್ತಿದ್ದವು. ನಾನು ಬಾಲಿವುಡ್‌ಗೆ ಸರಿಯಾಗಿ ಹೊಂದಬಹುದು, ಆದರೆ ಖಂಡಿತ ನಾನು ಅಲ್ಲಿನವಳು ಆಗಲಾರೆ. ಚಿತ್ರಜಗತ್ತು ನನಗೆ ಸಾಕಷ್ಟು ಪ್ರೀತಿ, ಬೆಂಬಲ ಮತ್ತು ಹೊಗಳಿಕೆಯನ್ನು ತಂದುಕೊಟ್ಟಿದೆ. ಆದರೆ ಅದರಿಂದ ಧರ್ಮದ ಜೊತೆಗಿನ ನನ್ನ ಸಂಬಂಧಕ್ಕೆ ಧಕ್ಕೆಯೊದಗಿದೆ. ನಿಧಾನವಾಗಿ, ಅಪ್ರಜ್ಞಾಪೂರ್ವಕವಾಗಿ ನಾನು (ಇಮಾನ್) ದೇವರ ಹಾದಿಯಿಂದ ದೂರವಾಗುತ್ತಿದ್ದೇನೆ. ನಾನು ಕೆಲಸ ಮಾಡುವ ಸ್ಥಳವು ನನ್ನ ಇಮಾನ್‌ ಹಾದಿಗೆ ಅಡ್ಡಬರುತ್ತಿದೆ. ಧರ್ಮದೊಂದಿಗಿನ ನನ್ನ ಸಂಬಂಧಕ್ಕೆ ಆತಂಕವೊಡ್ಡಿದೆ’ ಎಂದು ಝೈರಾ ಹೇಳಿಕೊಂಡಿದ್ದಾರೆ.

ಮೊದಲ ಚಿತ್ರ ಬಿಡುಗಡೆಯಾಗುವ ಮೊದಲೂ ಝೈರಾ ಹಲವು ಅಡ್ಡಿಗಳನ್ನು ಎದುರಿಸಿದ್ದರು. ‘ಚಿತ್ರಗಳಲ್ಲಿ ನಟಿಸುವುದು ಇಸ್ಲಾಂ ಆಶಯಗಳಿಗೆ ವಿರುದ್ಧವಾದುದು’ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಮಾಡಲಾಗಿತ್ತು. ಮೊದಲ ಚಿತ್ರಕ್ಕೇ ಝೈರಾ, ಅತ್ಯುತ್ತಮ ಪೋಷಕ ನಟಿಗೆ ನೀಡುವ ರಾಷ್ಟ್ರೀಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

error: Content is protected !! Not allowed copy content from janadhvani.com