janadhvani

Kannada Online News Paper

ನೋಟ್ ಬ್ಯಾನ್ನಿಂದ ಜೀವನ ಕಂಗಾಲು- ರಾಷ್ಟ್ರಪತಿಗೆ ದಯಾಮರಣಕ್ಕೆ‌ ಅರ್ಜಿ ಸಲ್ಲಿಸಿದ ಕುಟುಂಬ

ಮೈಸೂರು: ಕಳೆದ ಬಾರಿಯ ಮೋದಿ ಸರ್ಕಾರ ಕೈಗೊಂಡ ನೋಟು ಅಮಾನ್ಯೀಕರಣದ ಬಗ್ಗೆ ಜನಸಾಮಾನ್ಯರಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಲೇ ಇದೆ, ಅನೇಕ ಆರ್ಥಿಕ ತಜ್ಞರು ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ಸಾಕಷ್ಟು ಸಂಖ್ಯೆಯಲ್ಲಿ ಸಣ್ಣಪುಟ್ಟ ವ್ಯಾಪಾರಿಗಳಂತೂ ನೋಟ್ ಬ್ಯಾನ್ನಿಂದ ಜೀವನವನ್ನೇ ಕಳೆದುಕೊಂಡಿದ್ದಾರೆಂದು ಅನೇಕ ವರದಿಗಳು ಬಂದಿವೆ. ಇಂಥವರಲ್ಲಿ ಮೈಸೂರಿನ ಶೇಖರ್ ಮತ್ತವರ ಕುಟುಂಬವೂ ಸೇರಿದೆ.

ಹುಣಸೂರು ತಾಲ್ಲೂಕಿನ ಮನಗುನಹಳ್ಳಿ ಗ್ರಾಮದ ಶೇಖರ್ ಮತ್ತು ಕುಟುಂಬ ವ್ಯಾಪಾರದಲ್ಲಿ ನಷ್ಟ ಮಾಡಿಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಚೇತರಿಸಿಕೊಳ್ಳಲಾಗದೆ ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ‌ ಅರ್ಜಿ ಸಲ್ಲಿಸಿದ್ದಾರೆ. ಇವರ ಪರಿಸ್ಥಿತಿಗೆ ನೋಟ್ ಬ್ಯಾನ್ ಕಾರಣವಂತೆ.

ಪರೋಟ ವ್ಯಾಪಾರ ಮಾಡುತ್ತಿದ್ದ ಶೇಖರ್ 40 ಜನರಿಗೆ ಕೆಲಸ ನೀಡಿದ್ದರು. ಭರ್ಜರಿ ವ್ಯಾಪಾರ ನಡೆಯುತಿತ್ತು. ತಿಂಗಳಿಗೆ ಲಕ್ಷಾಂತರ ರೂಪಾಯಿ ಆದಾಯವಿತ್ತು. ಅದೇ ಜೋಶ್‌ನಲ್ಲಿ ನಿವೇಶನ ಖರೀದಿ ಮಾಡಿ ಮೈಸೂರಿನ ದಿವಾನ್ಸ್ ಹೌಸಿಂಗ್ ಫೈನಾನ್ಸ್‌ನಲ್ಲಿ ಮನೆ ಸಾಲ ಪಡೆದು ಮನೆಯೂ ಕಟ್ಟಿಕೊಂಡರು. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಇದ್ದಕ್ಕಿದ್ದಂತೆ ವ್ಯಾಪಾರ ಕುಸಿದು ಹೋಗಿದೆ.

ಶೇಖರ್ ಪ್ರಕಾರ, ವ್ಯಾಪಾರ ಕುಸಿಯಲು ಪ್ರಧಾನಿ ನರೇಂದ್ರ ಮೋದಿ ಮಾಡಿದ ನೋಟು ಅಮಾನ್ಯೀಕರಣವೇ ಕಾರಣ. ಅಲ್ಲಿಯವರೆಗೆ ಚೆನ್ನಾಗಿದ್ದ ವ್ಯಾಪಾರ ಆ ಬಳಿಕ ನಷ್ಟದತ್ತ ಸಾಗಿದೆ. ಇದರಿಂದ ಜೀವನ ನಡೆಸುವುದು ದುಸ್ತರವಾಗಿದೆ.‌ ಈ ಮಧ್ಯೆ ಮನೆಗೆ ಪಡರದ ಸಾಲ ತೀರಿಸಲು ಸಾಧ್ಯವಾಗಿಲ್ಲ. ಹೇಗೋ ಸಾಲ ಸೋಲ ಮಾಡಿ 2017ರವರಗೆ ಮನೆಯ ಸಾಲದ ಕಂತು ಕಟ್ಟಿದ್ದಾರೆ.

ಆದರೆ ಮುಂದೆ ಕಟ್ಟಲು ಸಾಧ್ಯವಾಗಿಲ್ಲ. ಹೀಗಾಗಿ ಫೈನಾನ್ಸ್‌ನವರು ಸಾಕಷ್ಟು ಬಾರಿ ನೋಟಿಸ್ ನೀಡಿದ್ದಾರೆ. ಕಡೆಗೆ ಮನೆ ಜಪ್ತಿ ಮಾಡಲು ಮುಂದಾಗಿದ್ದಾರೆ. ‌ವ್ಯಾಪಾರ ನಷ್ಟವಾದರೂ ಪರವಾಗಿಲ್ಲ ಮನೆಯಾದರೂ ಇದೆಯಲ್ಲ ಎಂದು ಸಮಾಧಾನದಲ್ಲಿದ್ದವರಿಗೆ ಫೈನಾನ್ಸ್ ಕಂಪನಿಯ ಕ್ರಮದಿಂದ ದಿಕ್ಕೇ ತೋಚದಂತಾಗಿದೆ. ಹೀಗಾಗಿ ಶೇಖರ್ ಪತ್ನಿ ರಮಾದೇವಿ ಪುತ್ರಿ ಮಾನಸ ಪುತ್ರ ಪೂರ್ಣಚಂದ್ರ ಜೊತೆ ದಯಾಮರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಹೀಗಾಗಲೇ ಶೇಖರ್ ಕುಟುಂಬದವರು ಆತ್ಮಹತ್ಯೆಗೆ ಯತ್ನಿಸಿ ವಿಫಲರಾಗಿದ್ದಾರೆ. ಈ ಸಂಬಂಧ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿದೆ. ಆದ್ದರಿಂದ ನಮಗೆ ಸಾಯಲು ಅನುಮತಿ ನೀಡಿ ಎಂದು ರಾಜ್ಯಪಾಲರು, ಮುಖ್ಯಮಂತ್ರಿಗಳು, ಜಿಲ್ಲಾಧಿಕಾರಿ, ತಹಶೀಲ್ದಾರ್, ಶಾಸಕರು ಸೇರಿ ಎಲ್ಲರಿಗೂ ಅವರು ಪತ್ರ ಬರೆದಿದ್ದಾರೆ. ಒಟ್ಟಾರೆ ಮಳೆ‌ ನಿಂತರೂ ಮಳೆ ಹನಿ ನಿಂತಿಲ್ಲ ಅನ್ನೋ ಮಾತಿನಂತೆ ನೋಟ್ ಬ್ಯಾನ್ ಆಗಿ ವರ್ಷಗಳೇ ಕಳೆದರೂ ಅದರಿಂದ ತೊಂದರೆಗೊಳಗಾದವರ ನೋವು ಇನ್ನು ಮುಗಿಯದಿರುವುದು ವಿಪರ್ಯಾಸ.

error: Content is protected !! Not allowed copy content from janadhvani.com