janadhvani

Kannada Online News Paper

ಮಲೇಷ್ಯಾ ಪ್ರಧಾನಿಯನ್ನು ಭೇಟಿಯಾದ ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಕೌಲಾಲಂಪುರ್,ಮೇ.27: ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಉಸ್ತಾದರು ಮಲೇಷ್ಯಾ ಪ್ರಧಾನ ಮಂತ್ರಿ ಡಾ.ಮಹಾತಿರ್ ಬಿನ್ ಮುಹಮ್ಮದ್’ರವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಇಂದು ಬೆಳಿಗ್ಗೆ ಕೌಲಾಲಂಪುರದಲ್ಲಿರುವ ಪ್ರಧಾನಮಂತ್ರಿಯವರ ಕಚೇರಿಗೆ ತಲುಪಿದ ಭಾರತದ ಗ್ರ್ಯಾಂಡ್ ಮುಫ್ತಿಯವರಿಗೆ ಅದ್ದೂರಿ ಸ್ವಾಗತ ದೊರೆಯಿತು. ಭೇಟಿಯಲ್ಲಿ ಮಲೇಷ್ಯಾ ಪ್ರಧಾನ ಮಂತ್ರಿಯವರಿಗೆ ಭಾರತದ ಮುಸ್ಲಿಮರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದರು. ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು ಎಂದು ಗ್ರ್ಯಾಂಡ್ ಮುಫ್ತಿ ಹೇಳಿದರು.

ಡಾ.ಮಹಾತಿರ್ ಬಿನ್ ಮುಹಮ್ಮದ್’ರವರ ದಶಕಗಳ ಸವಿಶೇಷ ದೂರದೃಷ್ಟಿ ಹಾಗೂ ಜನ ಸಮೂಹದೊಂದಿಗಿರುವ ಪರಸ್ಪರ ಉತ್ತಮ ಬಾಂಧವ್ಯವು ಮಲೇಷಿಯಾವನ್ನು ಉನ್ನತಿಗೇರಿಸಿದೆ ಎಂದು ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದರು.

ಮರ್ಕಝ್ ನ ನಿರ್ದೇಶಕರಾದ ಎ.ಪಿ. ಅಬ್ದುಲ್ ಹಕೀಮ್ ಅಝ್ಹರಿ ಜೊತೆಗಿದ್ದರು.ಭಾರತದಲ್ಲಿ ಜಾಮಿಯಾ ಮರ್ಕಝ್ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕುರಿತು ವಿಸ್ತೃತ ಮಾಹಿತಿಯನ್ನು ಪಡೆದ ಪ್ರಧಾನಿ, ಮಲೇಷಿಯಾದ ವಿಭಿನ್ನ ವಿಶ್ವವಿದ್ಯಾನಿಲಯಗಳೊಂದಿಗೆ ಸಹಕರಿಸಿ ದ್ವಿರಾಷ್ಟ್ರಗಳ ಶಿಕ್ಷಣ ಕ್ಷೇತ್ರವನ್ನು ಬಲಪಡಿಸುವ ಪ್ರಯತ್ನಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ಮಹಾತಿರ್ ಬಿನ್ ಮೊಹಮ್ಮದ್ ಅವರು ಮಲೇಷಿಯಾದ ಶೈಕ್ಷಣಿಕ, ಸಾಮಾಜಿಕ ಮತ್ತು ಅಭಿವೃದ್ಧಿ ಮುಖವನ್ನು ಸಂಪೂರ್ಣವಾಗಿ ಸುಧಾರಿಸಿದ ನಾಯಕರಾಗಿದ್ದಾರೆ. ಅವರು 2018 ರಲ್ಲಿ ಮತ್ತೆ ಪ್ರಧಾನಿ ಆಗುವ ಮೊದಲು, 1981 ರಿಂದ 2003 ರವರೆಗೆ ಮಲೇಷ್ಯಾ ಆಡಳಿತಗಾರರಾಗಿದ್ದರು.

ಮೂಲ : ಸಿರಾಜ್ ಡೈಲಿ
ಕನ್ನಡಕ್ಕೆ : ಡಿ.ಎ.ಮುಹಮ್ಮದ್ ಅಶ್ರಫ್ ಕೊಡಂಗಾಯಿ

error: Content is protected !! Not allowed copy content from janadhvani.com