ದೋಹಾ : ಪವಿತ್ರ ಹಜ್ ಕರ್ಮ ನಿರ್ವಹಿಸಲು ಖತಾರ್ ನಿಂದ ಆಗಮಿಸುವವರಿಗೆ ಸೌದಿ ಅರೇಬಿಯಾ ಹೇರಿದ ನಿಷೇಧವನ್ನು ಸಂಪೂರ್ಣವಾಗಿ ತೆರವುಗೊಳಿಸಬೇಕೆಂದು ಖತರ್ ಆಗ್ರಹಿಸಿದೆ.
ಖತರ್‍ನಿಂದ ಆಗಮಿಸುವವರಿಗೆ ಹಜ್ ಯಾತ್ರಿಕರಿಗೆ ಹಲವು ಪವಿತ್ರ ಸ್ಥಳಗಳ ಸಂದರ್ಶನಕ್ಕೆ ಸೌದಿ ನಿಷೇಧ ಹೇರಿದೆ.ಈ ರೀತಿ ತಾರತಮ್ಯ ತೋರದೆ ಇತರ ದೇಶದ ಯಾತ್ರಿಕರಿಗೆ ನೀಡುತ್ತಿರುವ ಸೌಕರ್ಯಗಳನ್ನು ತಮಗೂ ನೀಡಬೇಕಾಗಿದೆ ಎಂದು ಖತರ್ ಎಂಡೋವ್‍ಮೆಂಟ್ ಇಸ್ಲಾಮಿಕ್ ಅಫೇರ್ಸ್ ಸಚಿವಾಲಯ ಸೌದಿಯ ಅಧಿಕಾರಿಗಳಿಗೆ ತಿಳಿಸಿದೆ.
ವಿವಿಧ ಗಲ್ಫ್ ದೇಶಗಳಿಂದ ಬರುವ ಖತರ್ ಪ್ರಜೆಗಳೊಂದಿಗೆ ಸೌದಿ ತಾರತಮ್ಯ ಧೋರಣೆ ತಳೆದಿದ್ದು, ಇದನ್ನು ಕೊನೆಗೊಳಿಸಬೇಕೆಂದು ಸಚಿವಾಲಯ ಆಗ್ರಹಿಸಿದೆ. ರಮಝಾನ್‍ನಲ್ಲಿ ಉಮ್ರಾ ನಿರ್ವಹಿಸಲು, ಪವಿತ್ರ ಸ್ಥಳಗಳಿಗೆ ಭೇಟಿ ನೀಡಲು ಖತರ್ ಪ್ರಜೆಗಳು ಆಗಮಿಸುತ್ತಾರೆ. ಸೌದಿ ಅರೇಬಿಯಾ ಇದಕ್ಕೆ ಪ್ರತ್ಯೇಕ ಕಾನೂನು ರೂಪಿಸಿದೆ, ಇತರರಂತೆ ಖತರ್ ಪ್ರಜೆಗಳಿಗೆ ಆರಾಧನಾ ಕರ್ಮವನ್ನು ನಿರ್ವಹಿಸುವ ಹಕ್ಕನ್ನು ನಿಷೇಧಿಸಲಾಗಿದೆ.
ಖತರ್ ವಿರುದ್ಧ ಸೌದಿ ಅರೇಬಿಯಾ ಸಹಿತ ಕೊಲ್ಲಿ ದೇಶಗಳು ನಿಷೇಧ ಹೇರಿದ ನಂತರ ತಾರತಮ್ಯದಿಂದ ವರ್ತಿಸಲಾಗುತ್ತಿದೆ ಎಂದು ಖತರ್ ಆರೋಪಿಸಿದೆ.