ನವದೆಹಲಿ: ಶ್ರೀಲಂಕಾದಲ್ಲಿ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ, ಭಾರತದಲ್ಲೂ ಬುರ್ಖಾ ನಿಷೇಧ ಮಾಡಬೇಕು ಎಂದು ಶಿವಸೇನೆ ಒತ್ತಾಯಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಅಸಾವುದ್ದೀನ್ ಒವೈಸಿ, ಉಡುಗೆಗಳಿಗೆ ನಿಷೇಧ ವಿಧಿಸಿ ಭಯೋತ್ಪಾದನೆ ವಿರುದ್ಧ ಹೋರಾಡುವುದರ ಬದಲು ಮನಸ್ಥಿತಿ ಬದಲಾಗಬೇಕಿದೆ ಎಂದಿದ್ದಾರೆ.
ಭಯೋತ್ಪಾದನೆಯೇ ಈಗ ಧರ್ಮ ಆಗಿಬಿಟ್ಟಿದೆ. ಈ ಹಿಂದೆ ಕೆಲವೊಬ್ಬರು ಮಹಿಳೆಯರು ಜೀನ್ಸ್ ಧರಿಸಬಾರದು ಎಂದು ಹೇಳಿದ್ದರು. ಭಾರತದಲ್ಲಿರುವ ಮಹಿಳೆಯರು ಗೂಂಗಟ್ (ಮುಖ ಮುಚ್ಚುವಂತೆ ತಲೆ ಮೇಲೆ ಸೆರಗು ಹೊದ್ದುಕೊಳ್ಳುವುದು) ಹಾಕಿಕೊಳ್ಳುವುದನ್ನೂ ನೀವು ನಿಷೇಧಿಸುತ್ತೀರಾ? ವಸ್ತ್ರಗಳಿಂದ ಭಯೋತ್ಪಾದನೆಯನ್ನು ನಿರ್ಧರಿಸುವುದಾದರೆ ಸಾಧ್ವಿ ಪ್ರಜ್ಞಾ ಧರಿಸಿರುವುದು ಏನನ್ನು? ಅಷ್ಟೇ ಅಲ್ಲದೆ, ಬುರ್ಖಾ ಧರಿಸುವುದು ಪ್ರತಿಯೊಬ್ಬರ ಇಚ್ಛೆಗೆ ಬಿಟ್ಟ ವಿಚಾರ. ಒಂದು ವೇಳೆ ರಾಷ್ಟ್ರದ ಭದ್ರತೆಗೆ ಬುರ್ಖಾ ಧರಿಸುವುದರಿಂದ ಅಪಾಯ ಒದಗಲಿದೆ ಎಂದಾದರೆ, ಸಾಧ್ವಿಗಳು ತೊಡುವ ಉಡುಪಿನಿಂದಲೂ ತೊಂದರೆ ಆಗುವ ಸಾಧ್ಯತೆಯಿದೆ ಎಂದು ಓವೈಸಿ ಕಿಡಿಕಾರಿದ್ದಾರೆ.
ಶಿವಸೇನೆ ತನ್ನ ‘ಸಾಮ್ನಾ’ ಮುಖವಾಣಿಯಲ್ಲಿ ಬರೆದಿರುವ ಲೇಖನಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಓವೈಸಿ, ಬುರ್ಖಾ ನಿಷೇಧಕ್ಕೆ ಆಗ್ರಹಿಸುವ ಮೂಲಕ ಶಿವಸೇನೆ, ಚುನಾವಣಾ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ. ಈ ಕೂಡಲೇ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಓವೈಸಿ ಹೇಳಿದ್ದಾರೆ.
ಬುರ್ಖಾ ಅವರವರ ಆಯ್ಕೆ ಎಂದು ಸುಪ್ರೀಂಕೋರ್ಟ್ ತೀರ್ಪನ್ನು ಶಿವಸೇನೆ ಓದಿಕೊಳ್ಳಲಿ. ನಿಮಗೆ ಏನು ಇಷ್ಟವೋ ಅದನ್ನು ಧರಿಸಬಹುದು, ಅದು ಬುರ್ಖಾ ಆಗಿರಬಹುದು, ಜೀನ್ಸ್ ಆಗಿರಬಹುದು. ಇಲ್ಲಿ ಆಯ್ಕೆ ಇದೆ. ಅದು ನಮ್ಮ ಮೂಲಭೂತ ಹಕ್ಕು ಕೂಡಾ ಆಗಿದೆ ಎಂದಿದ್ದಾರೆ ಒವೈಸಿ.
ಶಿವಸೇನೆಯ ‘ಸಾಮ್ನಾ’ದಲ್ಲಿ ಪ್ರಕಟವಾಗಿರುವ ಲೇಖನವನ್ನು ಪೋಪಟ್ ಮಾಸ್ಟರ್-Popatmaster'(ಅರ್ಥಹೀನ) ಎಂದು ಕರೆದಿರುವ ಓವೈಸಿ, ಇದುವರೆಗೂ ಪ್ರಧಾನಿ ಮೋದಿ ವಿರುದ್ಧ ತೀವ್ರ ಟೀಕೆಗಳನ್ನು ಮಾಡುತ್ತಿದ್ದ ಶಿವಸೇನೆ, ಲೋಕಸಭಾ ಚುನಾವಣೆಗಾಗಿ ಬಿಜೆಪಿ ಜೊತೆ ಕೈಜೋಡಿಸಿದೆ ಎಂದು ಟೀಕಿಸಿದ್ದಾರೆ. ಚುನಾವಣೆಯ ವೇಳೆ ಜನರನ್ನು ಧ್ರುವೀಕರಣಗೊಳಿಸುವ ಕಾರ್ಯವನ್ನು ಶಿವಸೇನೆ ಮಾಡುತ್ತಿದೆ ಎಂದು ಆರೋಪಿಸಿರುವ ಒವೈಸಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.