ಭದ್ರೇಶ್ವರ್ : ತೃಣಮೂಲ ಕಾಂಗ್ರೆಸ್‌ನ 40 ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಹೇಳಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ಉಮೇದುವಾರಿಕೆಯನ್ನು ರದ್ದುಪಡಿಸಬೇಕು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಶಾಸಕರನ್ನು ಖರೀದಿಸಲು ಪ್ರಯತ್ನಿಸುವ ಮೂಲಕ ಅವರು ಸಂವಿಧಾನದ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ. ತೃಣಮೂಲ ಪಕ್ಷದಲ್ಲಿ ಕಾರ್ಯಕರ್ತರು ಸಮರ್ಪಣಾ ಭಾವ ಇರುವವರು. ಅವರು ಎಲ್ಲಾ ತ್ಯಾಗಕ್ಕೂ ಸಿದ್ಧರಾಗಿರುತ್ತಾರೆ. ಹಣದಿಂದ ಅವರನ್ನು ಖರೀದಿಸಲಾಗದು ಎಂದು ಮಮತಾ ತಿರುಗೇಟು ನೀಡಿದ್ದಾರೆ.ಹೂಗ್ಲಿ ಜಿಲ್ಲೆಯಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಟಿಎಂಸಿ ವರಿಷ್ಠೆ, ಅವರು ನಾಚಿಕೆ ಇಲ್ಲದ ಪ್ರಧಾನಿ ಎಂದು ಟೀಕಾಪ್ರಹಾರ ನಡೆಸಿದರು.ಮತದಾನದಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಹಣ ಲೂಟಿ ಮಾಡುವುದು ಮತ್ತು ಗಲಭೆ ಸೃಷ್ಟಿಸುವುದು ಬಿಜೆಪಿಯ ಉದ್ದೇಶವಾಗಿದೆ ಎಂದು ಆರೋಪಿಸಿದ ಅವರು, ಕಳೆದ ಐದು ವರ್ಷಗಳಲ್ಲಿ ದೇಶದ ಜನರಿಗೆ ಏನು ಮಾಡಿದ್ದೇನೆ ಎಂಬುದನ್ನು ನರೇಂದ್ರ ಮೋದಿ ಹೇಳುತ್ತಿಲ್ಲ. ಇಲ್ಲಿಗೆ ಬಂದು ಬಂಗಾಳವನ್ನು ಜಯಿಸುತ್ತೇನೆ ಎಂದು ಹೇಳುತ್ತಾರೆ. ಕಳೆದ ಐದು ವರ್ಷಗಳಲ್ಲಿ, ಅವರಿಗೆ ಬಂಗಾಳ ನೆನಪಾಗಿರಲಿಲ್ಲ. ಇತರ ರಾಜ್ಯಗಳಲ್ಲಿ ಸೋಲು ಖಚಿತವಾದುದರಿಂದ ಈಗ ಇಲ್ಲಿಗೆ ಬಂದಿದ್ದಾರೆ. ಜನರು ಮೋದಿಗೆ ಹೆದರುತ್ತಿದ್ದಾರೆ. ಜನರ ನಡುವೆ ಭಯದ ವಾತಾವರಣ ನಿರ್ಮಿಸಿದ ಮೊದಲ ನಾಯಕ ಅವರಾಗಿದ್ದಾರೆ. ನಿಜವಾದ ನಾಯಕ ಜನರನ್ನು ಪ್ರೀತಿಸುತ್ತಾನೆ. ಆದರೆ ಇವರು ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಜನರ ಮನೆಗೆ ಕಳುಹಿಸಿ ಹೆದರಿಸುತ್ತಿದ್ದಾರೆ ಎಂದು ಬ್ಯಾನರ್ಜಿ, ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದರು. ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ತಿಳಿಸಿದ್ದರು. ಆದರೆ ಅವರು ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.ಮತ್ತೊಂದೆಡೆ, 12,000 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಬೆಲೆ ನಿರಂತರವಾಗಿ ಹೆಚ್ಚಾಗುತ್ತಿದೆ. ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಜನರು ಜೀವನ ನಡೆಸುವುದು ದುಸ್ತರವಾಗಿದೆ. ಇವೆಲ್ಲವೂ ‘ಅಚ್ಛೇ ದಿನ್’ ನಿಂದ ಆಗಿದೆ ಎಂದು ವ್ಯಂಗ್ಯವಾಡಿದರು. ಬಿಎಸ್‌ಎನ್‌ಎಲ್‌ನ 50,000 ನೌಕರರು ಉದ್ಯೋಗ ಕಳೆದುಕೊಳ್ಳಲು ಸಿದ್ಧರಾಗಿದ್ದರೆ. ಈಗಾಗಲೇ ಜೆಟ್ ಏರ್‌ವೇಸ್ ಸಂಕಷ್ಟ ಪರಿಸ್ಥಿತಿಯಲ್ಲಿದೆ ಎಂದು ಮಮತಾ ಹೇಳಿದ್ದಾರೆ.