ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮುಖಕ್ಕೆ ಮುಸುಕು ಧರಿಸೋದನ್ನ ನಿಷೇಧಿಸಿ ಶ್ರೀಲಂಕಾ ಸರ್ಕಾರ ಆದೇಶ ನೀಡಿರೋ ಬೆನ್ನಲ್ಲೇ ಭಾರತದಲ್ಲಿ ಬುರ್ಖಾ ಬ್ಯಾನ್ ಮಾಡುವಂತೆ ಶಿವಸೇನೆ ಪ್ರಧಾನಿ ನರೇಂದ್ರ ಮೋದಿಗೆ ಒತ್ತಾಯಿಸಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಈ ಬಗ್ಗೆ ಲೇಖನ ಪ್ರಕಟಿಸಿರೋ ಶಿವಸೇನೆ, ಶ್ರೀಲಂಕಾದ ಹೆಜ್ಜೆಯನ್ನು ಅನುಸರಿಸಿ ಭಾರತದಲ್ಲಿ ಬುರ್ಖಾ ಬ್ಯಾನ್ ಮಾಡುವಂತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿದೆ.
ರಾವಣನ ದೇಶವಾದ ಶ್ರೀಲಂಕಾವೇ ಬುರ್ಖಾ ಬ್ಯಾನ್ ಮಾಡಿರುವಾಗ, ರಾಮನ ನೆಲವಾಗಿರುವ ಭಾರತಕ್ಕೆ ಯಾಕಾಗಲ್ಲ? ಭಾರತದಲ್ಲೂ ಇದನ್ನ ಜಾರಿಗೆ ತನ್ನಿ ಎಂದು ಶಿವಸೇನೆ ಹೇಳಿದೆ. ಇಂದು ಪ್ರಧಾನಿ ಮೋದಿ ಅಯೋಧ್ಯೆಗೆ ಭೇಟಿ ನೀಡುತ್ತಿರೋ ಹಿನ್ನೆಲೆ ಈ ಪ್ರಶ್ನೆಯನ್ನ ಕೇಳ್ತಿದ್ದೀವಿ. ರಾಷ್ಟ್ರದ ಹಿತದೃಷ್ಟಿಯಿಂದ ಈ ಒತ್ತಾಯ ಮುಂದಿಡ್ತಿದ್ದೀವಿ ಎಂದು ಲೇಖನದಲ್ಲಿ ಹೇಳಲಾಗಿದೆ.
ಶಿವಸೇನೆಯ ಈ ಒತ್ತಾಯವನ್ನು ಬಿಜೆಪಿ ವಿರೋಧಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಸಂಸದ ಹಾಗು ಬಿಜೆಪಿ ರಾಷ್ಟ್ರೀಯ ವಕ್ತಾರ ಜಿವಿಎಲ್ ನರಸಿಂಹ ರಾವ್, ಭಾರತದಲ್ಲಿ ಬುರ್ಖಾ ಬ್ಯಾನ್ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಹಾಗೇ ಕೇಂದ್ರ ಸಚಿವ ರಾಮ್ದಾಸ್ ಅಠಾವಳೆ ಕೂಡ ಪ್ರತಿಕ್ರಿಯಿಸಿದ್ದು, ಬುರ್ಖಾ ಧರಿಸೋ ಮಹಿಳೆಯರೆಲ್ಲರೂ ಭಯೋತ್ಪಾದಕರಲ್ಲ. ಅವರು ಭಯೋತ್ಪಾದಕರಾಗಿದ್ದರೆ ಬುರ್ಖಾ ತೆಗೆಯಬೇಕು.
ಆದರೆ, ಕೆಲವರು ಇದನ್ನು ದರ್ಬಳಕೆ ಮಾಡುತ್ತಾರೆ. ಅವರನ್ನು ಶಿಕ್ಷಿಸಬೇಕು. ಆದ್ದರಿಂದಾಗಿ ದೇಶದಲ್ಲಿ ಆಗಲಿ ಮಹಾರಾಷ್ಟ್ರದಲ್ಲಿಯಾಗಲಿ ಬುರ್ಖಾ ನಿಷೇಧ ಮಾಡಬಾರದು. ಇದು ಅವರ ಸಂಸ್ಕೃತಿಯ ಒಂದು ಭಾಗ ಹಾಗೂ ಬುರ್ಖಾ ಧರಿಸೋ ಹಕ್ಕು ಅವರಿಗಿದೆ. ಭಾರತದಲ್ಲಿ ಬುರ್ಖಾ ಬ್ಯಾನ್ ಆಗಬಾರದು ಎಂದು ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಸರಣಿ ಸ್ಫೋಟ ನಡೆದ ಬೆನ್ನಲ್ಲೇ, ದೇಶದಾದ್ಯಂತ ಸಾರ್ವಜನಿಕ ಸ್ಥಳಗಳಲ್ಲಿ ಮುಖ ಮುಚ್ಚುವಂತೆ ಮುಸುಕು ಧರಿಸೋದನ್ನ ಬ್ಯಾನ್ ಮಾಡಲಾಗಿದೆ. ಯಾವುದೇ ವ್ಯಕ್ತಿ ಗುರುತು ಮರೆಮಾಚುವಂತೆ ಯಾವುದೇ ಬಟ್ಟೆಯಿಂದ ಮುಸುಕು ಧರಿಸಬಾರದು ಎಂದು ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ, ಆದೇಶ ನೀಡಿದ್ದಾರೆ. ಕಳೆದ ಸೋಮವಾರದಿಂದ ಈ ಆದೇಶ ಜಾರಿಯಾಗಿದೆ.
ಶ್ರೀಲಂಕಾದ ಈ ಆದೇಶದ ಕುರಿತು ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವರು ಒಳ್ಳೆಯ ನಿರ್ಧಾರ ಎಂದಿದ್ದರೆ ಹಲವರು, ಬುರ್ಖಾ ನಿಷೇಧ ಮಾಡುವುದರಿಂದ ಭಯೋತ್ಪಾದನೆ ನಿಯಂತ್ರಣವಾಗುವುದಿಲ್ಲ. ಬದಲಿಗೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಂತೆ ಆಗುತ್ತದೆ ಎಂದಿದ್ದಾರೆ. ಅದೂ ಅಲ್ಲದೆ ಆತ್ಮಾಹುತಿ ದಾಳಿ ನಡೆಸಿದವರು ಯಾರೂ ಬುರ್ಖಾ ಧರಿಸಿದವರಾಗಿರಲಿಲ್ಲ, ಬುರ್ಖಾ ನಿಷೇಧಿಸುವುದರಿಂದ ಉಗ್ರವಾದವನ್ನು ತಡೆದಂತಾಗುವುದಿಲ್ಲ ಎಂದಿದ್ದಾರೆ.