ನವದೆಹಲಿ: ಬ್ರಿಟನ್ ಪೌರತ್ವ ಹೊಂದಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆಯು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮಂಗಳವಾರ ನೋಟಿಸ್ ಕೊಟ್ಟಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಪ್ರಿಯಾಂಕಾ ಗಾಂಧಿ, ‘ರಾಹುಲ್ ಗಾಂಧಿ ಭಾರತೀಯ ಎಂಬುದು ಇಡೀ ಭಾರತಕ್ಕೆ ತಿಳಿದಿದೆ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರಾಹುಲ್ ಗಾಂಧಿ ಅವರು ಸ್ಪರ್ಧೆ ಮಾಡಲಿರುವ ಉತ್ತರಪ್ರದೇಶದ ಅಮೇಥಿ ಕ್ಷೇತ್ರದಲ್ಲಿಂದು (ಮಂಗಳವಾರ) ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ಅವರು ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ‘ಇಂತಹ ಮೂರ್ಖ ತನದ ಚರ್ಚೆಗಳನ್ನು ನಾನೆಂದೂ ಕೇಳಿರಲಿಲ್ಲ, ರಾಹುಲ್ ಗಾಂಧಿ ಭಾರತದಲ್ಲೇ ಹುಟ್ಟಿದ್ದು, ಭಾರತದಲ್ಲೇ ಬೆಳೆದದ್ದು. ಇದು ಇಡೀ ಭಾರತಕ್ಕೆ ತಿಳಿದ ವಿಷಯ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಕಂಪನಿಯೊಂದರ ನೋಂದಣಿ ವೇಳೆ ರಾಹುಲ್ ಗಾಂಧಿ ಅವರು ತಾವು ಬ್ರಿಟನ್ ಪೌರತ್ವ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ ಎಂದು ಆರೋಪಿಸಿ, ರಾಜ್ಯಸಭೆಯ ಬಿಜೆಪಿ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರು ಗೃಹ ಇಲಾಖೆಗೆ ದೂರು ನೀಡಿದ್ದರು.
ಈ ದೂರಿನ ಅನ್ವಯ ಗೃಹ ಇಲಾಖೆಯು ಮಂಗಳವಾರ ರಾಹುಲ್ ಗಾಂಧಿ ಅವರಿಗೆ ನೋಟಿಸ್ ಜಾರಿ ಮಾಡಿ ಸ್ಪಷ್ಟನೆ ಕೇಳಿದೆ. ನೋಟಿಸ್‌ಗೆ ಹದಿನೈದು ದಿನಗಳಲ್ಲಿ ಉತ್ತರ ನೀಡುವಂತೆಯೂ ತಿಳಿಸಿದೆ.