janadhvani

Kannada Online News Paper

ಇರಾನ್ನಿಂದ ತೈಲ ಆಮದಿಗೆ ಅಮೆರಿಕಾ ಅಡ್ಡಿ- ಭಾರೀ ಏರಿಕೆಯಾಗಲಿದೆ ಇಂಧನ ದರ

ಬೆಂಗಳೂರು(ಏ.26): ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಿಲ್ಲದ ಕಾರಣ ಕೊಂಚ ನಿರಾಳವಾಗಿದ್ದ ವಾಹನ ಸವಾರರಿಗೆ ಕಹಿಸುದ್ದಿ ಸಿಕ್ಕಿದೆ. ಮೂರು ತಿಂಗಳ ಮುನ್ನ ಬೆಲೆ ಏರಿಕೆಗೆ ತತ್ತರಿಸಿ ಹೋಗಿದ್ದ ವಾಹನ ಸವಾರರಿಗೆ ಮತ್ತೆ ಸಂಕಷ್ಟ ಎದುರಾಗಲಿದೆ. ಮುಂದಿನ ದಿನಗಳಲ್ಲಿ ಇಂಧನ ದರದಲ್ಲಿ ಭಾರೀ ಏರಿಕೆಯಾಗಲಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕೂಡ ಲೀಟರ್ಗೆ 5 ರೂ.ನಿಂದ 10 ರೂ. ಏರಿಕೆಯಾಗಬಹುದು ಎಂದು ಹೇಳಲಾಗುತ್ತಿದೆ.

ಇರಾನ್ನಿಂದ ತೈಲ ಆಮದು ಮಾಡಿಕೊಳ್ಳಲು ಅಮೆರಿಕ ನೀಡಿದ್ದ ವಿನಾಯಿತಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇದು ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಗೆ ಕಾರಣವಾಗಿದೆ. ಈ ಆಮದು ಮೇಲಿನ ನಿರ್ಬಂಧ ಹೇರಿದ ಪರಿಣಾಮ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್ ಗೆ 5 ರಿಂದ 10 ರೂ.ವರೆಗೆ ಏರಿಕೆಯಾಗಲಿದೆ ಎನ್ನುತ್ತಿವೆ ಮೂಲಗಳು.

ಇತ್ತೀಚೆಗೆ ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀಟರ್‌ಗೆ ₹ 75.33 ಇದೆ. ಡೀಸೆಲ್‌ ದರ 68.61 ರೂ. ಇದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 72.95 ರೂ. ಮತ್ತು ಡೀಸೆಲ್‌ ದರ 66.46 ರೂ. ಇದೆ.

ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 75.71 ರೂ. ಮತ್ತು ಡೀಸೆಲ್‌ ದರ 70.17 ರೂ, ಪಶ್ಚಿಮ ಬಂಗಾಳ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 74.97 ರೂ. ಮತ್ತು ಡೀಸೆಲ್‌ ದರ 68.20 ರೂ, ವಾಣಿಜ್ಯ ನಗರಿ ಮುಂಬೈನಲ್ಲಿ ಪೆಟ್ರೋಲ್‌ ದರ 78.52 ರೂ. ಮತ್ತು ಡೀಸೆಲ್‌ ದರ 69.56 ರೂ. ಆಗಿದೆ.

ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರಲ್‌ಗೆ ರೂ. 4636 ಕ್ಕೆ ತಲುಪಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಾಣಲಿದ್ದೇವೆ.