janadhvani

Kannada Online News Paper

ವಾಟ್ಸ್ ಆ್ಯಪ್ ‌ಹ್ಯಾಕ್: ಎಚ್ಚರಿಕೆ ವಹಿಸುವಂತೆ ಯುಎಇ ಟೆಲಿಕಾಂ ಅಥಾರಿಟಿ

ದುಬೈ: ವಾಟ್ಸ್ ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡುವ ಹುನ್ನಾರಗಳ ವಿರುದ್ದ ಜಾಗರೂಕತೆಯಿಂದ ಇರುವಂತೆ ಯುಎಇ ಟೆಲಿಕಾಂ ರೆಗುಲೇಟರಿ ಅಥಾರಿಟಿಯು ಎಚ್ಚರಿಕೆ ನೀಡಿದೆ. ಅಜ್ಞಾತರು ಕಳುಹಿಸುವ ವೆರಿಫಿಕೇಶನ್ ಕೋಡ್‌ಗಳಿಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ಅಥಾರಿಟಿ ವ್ಯಕ್ತಪಡಿಸಿದೆ.

ವಾಟ್ಸ್ ಆ್ಯಪ್ ಪ್ರಾರಂಭಿಸುವಾಗ ಲಭಿಸುವ ವೆರಿಫಿಕೇಶನ್ ಕೋಡ್‌ಗಳಿಗಲ್ಲದೆ ಯಾವುದೇ ಅನ್ಯ ವೆರಿಫಿಕೇಶನ್‌ಗೆ ಪ್ರತಿಕ್ರಿಯೆ ನೀಡಬೇಕಾದ ಅಗತ್ಯವಿಲ್ಲ. ಹೀಗೆ ಲಭಿಸುವ ಕೋಡ್‌ಗಳನ್ನು ಅನ್ಯರೊಂದಿಗೆ ವಿನಿಮಯ ಮಾಡುವುದೂ ತರವಲ್ಲ ಎಂದು ಅಥಾರಿಟಿ ತಿಳಿಸಿದ್ದು, ಒಂದು ವೇಳೆ ಹಾಗೇನಾದರೂ ಕೋಡ್‌ಗಳನ್ನು ನೀಡಿದಲ್ಲಿ ನಿಮ್ಮ ವಾಟ್ಸ್ ಆ್ಯಪ್ ಹ್ಯಾಕ್ ಮಾಡಲ್ಪಡುವ ಸಾಧ್ಯತೆ ಅತೀ ಹೆಚ್ಚು ಎಂದಿದೆ. ಅಕೌಂಟ್ ವೆರಿಫೈ ಮಾಡುವ ನೆಪದಲ್ಲಿ ಬರುವ ಲಿಂಕ್ ಮತ್ತು ಅಟಾಚ್ಮೆಂಟ್‌ಗಳನ್ನು ಕಡೆಗಣಿಸುವಂತೆಯೂ ಅಥಾರಿಟಿ ಎಚ್ಚರಿಸಿದೆ.

ಅನುಮಾನಾಸ್ಪದ ಲಿಂಕ್‌ಗಳನ್ನು ತೆರೆಯುವುದಾಗಲಿ, ನಿಮ್ಮ ಮಾಹಿತಿಯನ್ನು ನೀಡುವುದಾಗಲಿ ಮಾಡಬಾರದು. ಹ್ಯಾಕರ್‌ಗಳು ಹಾದಿ ತಪ್ಪಿಸುವ ಸಲುವಾಗಿ ಇಂಗ್ಲೀಷ್ ಹೊರತಾಗಿ ಫ್ರೆಂಚ್ ಭಾಷೆಯಲ್ಲೂ ವೆರಿಫಿಕೇಶನ್ ಕೋಡ್‌ಗಳನ್ನು ಕಳುಹಿಸುತ್ತಾರೆ. ಇಂತಹ ವಂಚನೆಗಳ ಬಗ್ಗೆ ಜಾಗರೂಕತೆಯಿಂದ ಇರುವಂತೆ ಟಿಆರ್‌ಎ ತಿಳಿಸಿದೆ.