ಮುಂಬೈ: ಗಲ್ಫ್ ಮೂಲದ ಎಮಿರೇಟ್ಸ್‌ನೊಂದಿಗೆ ಕೋಡ್‌ಶೇರ್ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ವಿಮಾನಯಾನ ಸಂಸ್ಥೆ ಸ್ಪೈಸ್ ಜೆಟ್ ತಿಳಿಸಿದೆ.
ಈ ಒಪ್ಪಂದವು ಸ್ಪೈಸ್ ಜೆಟ್ ಪ್ರಯಾಣಿಕರಿಗೆ ಅಮೆರಿಕ, ಯುರೋಪ್,ಆಫ್ರಿಕಾ ಮತ್ತು ಮಧ್ಯಪ್ರಾಚ್ಯಗಳಿಗೆ ತೆರಳಲು ಪ್ರಯಾಣಿಕರಿಗೆ ವಿಶಾಲ ಸಂಪರ್ಕ ಜಾಲ ಒದಗಿಸಲಿದೆ.
ಇದಕ್ಕೆ ಪ್ರತಿಯಾಗಿ ಎಮಿರೇಟ್ಸ್ ಪ್ರಯಾಣಿಕರು ಸ್ಪೈಸ್ ಜೆಟ್‌ನ 51 ಆಂತರಿಕ ಸ್ಥಳಗಳಿಗೆ ಅನಿಯಮಿತ ಪ್ರವೇಶ ಪಡೆದುಕೊಳ್ಳಲಿದ್ದಾರೆ. ಇದರಲ್ಲಿ 10 ನೇರ ಸಂಪರ್ಕ ಮತ್ತು 41 ವಿಮಾನಗಳ ನಡುವಿನ ಸಂಪರ್ಕದಿಂದ ಸಾಧ್ಯವಾಗಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಇದು ಎಮಿರೇಟ್ಸ್‌ನೊಂದಿಗೆ ಸ್ಪೈಸ್‌ಜೆಟ್‌ನ ಮೊದಲ ಕೋಡ್ ಶೇರ್ ಒಪ್ಪಂದವಾಗಿದೆ. ಇದರಲ್ಲಿ ಸೇವೆಯ ಅನುಮೋದನೆಗಳು ಇರಲಿದ್ದು, ಎಮಿರೇಟ್ಸ್‌ನ ಪ್ರತಿಸ್ಪರ್ಧಿ ಎತಿಹಾದ್ ವಿಮಾನಯಾನ ಸಂಸ್ಥೆಯ ಹೂಡಿಕೆಯುಳ್ಳ ಜೆಟ್ ಏರ್‌ವೇಸ್‌ನ ಹಾರಾಟಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಈ ಒಪ್ಪಂದ ಮಹತ್ವ ಪಡೆದುಕೊಂಡಿದೆ.
ಕೋಡ್ ಶೇರಿಂಗ್ ಒಪ್ಪಂದದ ಪ್ರಕಾರ ತನ್ನ ಹಾರಾಟ ಸೇವೆ ಲಭ್ಯವಿಲ್ಲದ ಸ್ಥಳಗಳಿಗೆ ಪ್ರಯಾಣಿಕರು ತೆರಳಲು ಅನುಕೂಲವಾಗುವಂತೆ ಉಭಯ ವಿಮಾನಯಾನ ಸಂಸ್ಥೆಗಳು ಪರಸ್ಪರ ಅವಕಾಶ ನೀಡುತ್ತವೆ.